ಮಹಾರಾಷ್ಟ್ರ
ಭಾರತದ ಒಂದು ರಾಜ್ಯ. ಭಾರತ ಪಶ್ಚಿಮಕ್ಕಿರುವ ಈ ರಾಜ್ಯ ದಕ್ಷಿಣ ಮತ್ತು ಮಧ್ಯಭಾರತ ಪ್ರದೇಶಗಳಲ್ಲಿ ಚಾಚಿಕೊಂಡಿದ್ದು ಉತ್ತರದಲ್ಲಿ ಮಧ್ಯಪ್ರದೇಶ ಈಶಾನ್ಯ ಮತ್ತು ಪೂರ್ವಕ್ಕೆ ಚತ್ತೀಸ್‍ಘರ್, ವಾಯವ್ಯದಲ್ಲಿ ಗುಜರಾತ್, ಪೂರ್ವಕ್ಕೆ ಆಂಧ್ರಪ್ರದೇಶ ದಕ್ಷಿಣದಲ್ಲಿ ಕರ್ನಾಟಕ ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ ಸುತ್ತುವರೆದಿದೆ. 35 ಜಿಲ್ಲೆಗಳಿಂದ 43,711, ಗ್ರಾಮಗಳಿಂದ ಮತ್ತು 378 ಪಟ್ಟಣ ನಗರಗಳಿಂದ ಕೂಡಿರುವ ಈ ರಾಜ್ಯದ ವಿಸ್ತೀರ್ಣ 3,07,713 ಚ.ಕಿ.ಮೀ. 50,334,270 ಮಂದಿ ಪುರುಷರು 46,417,977 ಮಂದಿ ಮಹಿಳೆಯರೂ ಇರುವ ಈ ರಾಜ್ಯದ ಒಟ್ಟು ಜನಸಂಖ್ಯೆ 96752247 (2001) ರಾಜಧಾನಿ ಮುಂಬಯಿ.

	ಮೇಲ್ಮೈಲಕ್ಷಣ : ಉತ್ತರ ಅಕ್ಷಾಂಶ 15ಲಿ 4 ನಿಂದ 22ಲಿ 1 - ಪೂರ್ವರೇಖಾಂಶ 72ಲಿ 6 - 80ಲಿ 9 ವರೆಗೆ ಹರಡಿರುವ ಮಹಾರಾಷ್ಟ್ರ ವೈವಿಧ್ಯಮಯ ಭೂಪ್ರದೇಶದಿಂದ ಕೂಡಿದೆ. ಇಲ್ಲಿ ಮೈದಾನ, ಮಲೆನಾಡು, ಅರೆಮಲೆನಾಡು, ಸಮುದ್ರತೀರ ಪ್ರದೇಶ ಮತ್ತು ಪಶ್ಚಿಮ ಘಟ್ಟಗಳಿಂದ ಕೂಡಿದ ಬೆಟ್ಟಗುಡ್ಡ ಪ್ರದೇಶಗಳನ್ನು ಕಾಣಬಹುದು. ಮುಂಬಯಿ ಬಳಿ ವಿಶಾಲವಾಗಿ ಉಳಿದ ತೀರದಲ್ಲಿ ಅಷ್ಟೇನೂ ವಿಶಾಲವಲ್ಲದ ಸಮುದ್ರತೀರದ ಕೊಂಕಣ ಪ್ರದೇಶವಿದೆ, ಉದ್ದಕ್ಕೂ ಇರುವ ಅನೇಕ ಬೆಟ್ಟ ಗುಡ್ಡಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಬಹಳಷ್ಟುನದಿಗಳು ಉಗಮಿಸುವುವು. ಅವುಗಳಲ್ಲಿ ಹೆಚ್ಚಿನವು ಸುಮಾರು 80ಕಿಮೀ. ಗಿಂತಲೂ ಕಡಿಮೆ ಉದ್ದದ ಹರಿವುಳ್ಳವು. ಇವುಗಳಲ್ಲಿ ಭೋರಘಾಟನಲ್ಲಿ ಉಗಮಿಸುವ ಉಲ್ಲಾಸ್ ನದಿಯೊಂಧೇ ಸುಮಾರು 129ಕಿಮೀ ಹರಿದು ಸಮುದ್ರ ಸೇರುತ್ತದೆ. ದಖನ್ ಪ್ರಸ್ಥಭೂಮಿಯ ಪಶ್ಚಿಮದಲ್ಲಿ ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಉತ್ತರದಲ್ಲಿ ಸಾತ್ಪುರ ಬೆಟ್ಟ ಶ್ರೇಣಿ ಇವೆ. ರಾಜ್ಯದ ದಕ್ಷಿಣ ಹಾಗೂ ಆಗ್ನೇಯ ಮತ್ತು ವಾಯವ್ಯದಲ್ಲಿ ಸಣ್ಣ ಬೆಟ್ಟ ಸಾಲುಗಳಿವೆ. ಮಹಾರಾಷ್ಟ್ರದ ಹೆಚ್ಚುಭಾಗ ಅಗ್ನಿಪರ್ವತದ ಲಾವಾರಸ ಎಂದು ಗುರುತಿಸಲಾಗಿದೆ. ರಾಜ್ಯದ ನೈಋತ್ಯ ಭಾಗದ ರತ್ನಗಿರಿ ಜಿಲ್ಲೆ ವಿವಿಧ ಭೂಮಿ ರೂಪಾಂತರಿತ ಅಗ್ನಿಶಿಲೆಯಿಂದ ಕೂಡಿದೆ. ಸಹ್ಯಾದ್ರಿ ಪರ್ವತಶ್ರೇಣಿ ಮಹಾರಾಷ್ಟ್ರದ ಜಲವಿಭಾಗ. ಇದು ಪಶ್ಚಿಮದ ಕೊಂಕಣ ಪ್ರದೇಶದ ನದಿಗಳನ್ನು ಪೂರ್ವಕ್ಕೆ ಹರಿಯುವ ಕೃಷ್ಣಾ. ಗೋದಾವರಿ ನದಿಗಳನ್ನು ಬೇರ್ಪಡಿಸಿದೆ. ರಾಜ್ಯದ ಹೆಚ್ಚು ಭಾಗ ಆವರಿಸಿರುವ ಪ್ರಸ್ಥಭೂಮಿ ಪೂರ್ವ ಮತ್ತು ಪಶ್ಚಿಮಕ್ಕೆ ಇಳಿಮುಖವಾಗಿದೆ. ಮಹಾಬಲೇಶ್ವರ (1438ಮೀ) ಸಪ್ತಶೃಂಗ ಮತ್ತು ಕಾಲ್‍ಸುಭಾಯ್ (1646ಮೀ) ಗಿರಿಶಿಖರಗಳನ್ನೊಳಗೊಂಡ ಪಶ್ಚಿಮ ಪ್ರಸ್ಥಭೂಮಿಯ ಸರಾಸರಿ ಎತ್ತರ ಸುಮಾರು 900ಮೀ. ಮಧ್ಯಪ್ರಸ್ಥ ಭೂಮಿಯ ಎತ್ತರ 300ಮೀ ಗಿಂತಲೂ ಕಡಿಮೆಯಿದೆ. ಸಾತ್ಪರು ಬೆಟ್ಟಶ್ರೇಣಿ ನರ್ಮದಾ ಮತ್ತು ತಪ್ತಿ ನದೀ ಕಣಿವೆಗಳ ಮಧ್ಯೆ ಸಮಾಂತರವಾಗಿ ಹಬ್ಬಿದೆ. ಪಶ್ಚಿಮದ ತುರನ್ ಮಾಲ್ ಪ್ರಸ್ಥಭೂಮಿಯ ಎತ್ತರ ಸುಮಾರು. 1.000ಮೀ, ಸಾತ್‍ಮಲಾಸ್, ಬಲಘಾಟ್ ಮತ್ತು ಮಹಾದೇವ ಗಿರಿಶ್ರೇಣಿಗಳಿವೆ. ಇವೆಲ್ಲವೂ ಮೂಲ ಸಹ್ಯಾದ್ರಿ ಗಿರಿ ಶ್ರೇಣಿಗೆ ಸೇರಿದ್ದು 200ರಿಂದ 300ಮೀ ವೆರೆಗೆ ಎತ್ತರವಾಗಿವೆ. ಇವು ಮಹಾರಾಷ್ಟ್ರದ ಪಶ್ಚಿಮ ತೀರದ ಉತ್ತರದಲ್ಲಿ ದಾಮನ್‍ಗಂಗಾ ನದಿ, ದಕ್ಷಿಣದಲ್ಲಿ ತೆರೆಕೋಲ್ ನದಿ ಅರಬ್ಬೀಸಮುದ್ರ ಸೇರುವವರೆಗೆ ಇವೆ. ಇತ್ತ ಸಹ್ಯಾದ್ರಿ ಸುಮಾರು 45ಕಿಮೀನಿಂದ 75ಕಿಮೀವರೆಗೆ ಹರಡಿದೆ. ಈ ಪ್ರದೇಶ ಸಹ್ಯಾದ್ರಿಯಿಂದ ರಭಸವಾಗಿ ಹರಿವ ನದಿ ತೊರೆಗಳಿಂದ ಕೂಡಿದೆ. ಭೀಮ, ಕೃಷ್ಣಾ, ಗೋದಾವರಿ, ತಪ್ತಿ, ವಾರ್ಧ ಮತ್ತು ವೈನಗಂಗಾ ಇಲ್ಲಿಯ ಮುಖ್ಯ ನದಿಗಳು. ಮಹಾರಾಷ್ಟ್ರದ ಉತ್ತರ ಗಡಿಯ ಧೂಲೆ ಜಿಲ್ಲೆಯಲ್ಲಿ ಸುಮಾರು 54ಕಿಮೀ ದೂರ ನರ್ಮದಾ ನದಿ ಹರಿಯುವುದು. ತಪತಿನದಿ ಸುಮಾರು 208ಕಿಮೀ ದೂರ ಹರಿಯುವುದು, ಪೂರ್ಣ ಇದರ ಉಪನದಿ. ಗೋದಾವರಿ ನದಿ ಈ ರಾಜ್ಯದಲ್ಲಿ ಎಲ್ಲೆಯಾಗಿ ಸಾಗಿ ಬಂಗಾಲಕೊಲ್ಲಿ ಸೇರುವುದು. ಮಧ್ಯಪ್ರದೇಶದ ಬೆಟ್ಟಗಳಲ್ಲಿ ಹುಟ್ಟಿ ಮಹಾರಾಷ್ಟ್ರದಲ್ಲಿ ಹರಿಯುವ ವಾರ್ದಾನದಿ ಮುಂದೆ ವೈನಗಂಗಾನದಿಯನ್ನು ಕೂಡಿಕೊಳ್ಳುವುದು. ವೈನಗಂಗಾನದಿ ಮಧ್ಯಪ್ರದೇಶದ ಬೆಟ್ಟಗಳಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಸುಮಾರು 205ಕಿಮೀ ಹರಿದು ಅನಂತರ ವಾರ್ಧನದಿಯನ್ನು ಸೇರಿಸಿಕೊಂಡು ಮುಂದುವರಿದು ಗೋದಾವರಿಯನ್ನು ಕೂಡಿಕೊಳ್ಳುವುದು. ಪೆನಗಂಗಾ ಇದರ ಉಪನದಿ. ಭೀಮಾನದಿ ಸಹ್ಯಾದ್ರಿಯಲ್ಲಿ ಜನಿಸಿ ಮಹಾರಾಷ್ಟ್ರದಲ್ಲಿ 451ಕಿಮೀ. ದೂರ ಹರಿದು ಮುಂದೆ ಕರ್ನಾಟಕದಲ್ಲಿ ಕೃಷ್ಣಾನದಿಯನ್ನು ಕೂಡಿಕೊಳ್ಳುವುದು. ಸಿನ ಮತ್ತು ನಿರ ಈ ನದಿಯ ಉಪನದಿಗಳು, ಗೋದಾವರಿಯಷ್ಟೇ ಪ್ರಾಮುಖ್ಯ ಪಡೆದಿರುವ ಕೃಷ್ಣಾನದಿ ಸಹ್ಯಾದ್ರಿಯಲ್ಲಿ ಜನಿಸಿ ಮಹಾರಾಷ್ಟ್ರದಲ್ಲಿ 282ಕಿಮೀ. ಮಾತ್ರ. ಈ ನದಿಗಳು ಮಳೆಗಾಲದಲ್ಲಿ ತುಂಬಿ ರಭಸದಿಂದ ಹರಿಯುವುವು. ಇವುಗಳಲ್ಲಿ ವೈತರಣಿ, ಉಲ್ಲಾಸ, ಸಾವಿತ್ರಿ ಮತ್ತು ವಾಸಿಷ್ಟಿ ನದಿಗಳು ಮುಖ್ಯವಾದವು.

	ಹವಾಗುಣ : ಇಲ್ಲಿಯ ಹವಾಗುಣ ಈಶಾನ್ಯ ಮತ್ತು ನೈಋತ್ಯ ಕ್ಲುಪ್ತಮಾರುತಗಳ ಪ್ರಭಾವಕ್ಕೆ ಒಳಗಾಗಿದೆ. ಮಾರ್ಚಿನಿಂದ ಮೇ ತನಕ ಬೇಸಗೆ ಕಾಲವೆಂದೂ ಜೂನ್‍ನಿಂದ ಅಕ್ಟೋಬರ್ ತನಕ ಮಳೆಗಾಲವೆಂದೂ ನವೆಂಬರ್‍ನಿಂದ ಫೆಬ್ರವರಿ ತನಕ ಚಳಿಗಾಲವೆಂದೂ ವಿಂಗಡಿಸಬಹುದು. ಬಂಗಾಲಕೊಲ್ಲಿಯಿಂದ ಬೀಸುವ ಈಶಾನ್ಯ ಮಾರುತಗಳಿಂದ ಮಹಾರಾಷ್ಟ್ರದ ಪೂರ್ವ ಮತ್ತು ಉತ್ತರ ಭಾಗ ಹೆಚ್ಚು ಮಳೆ ಪಡೆಯುತ್ತದೆ. ಹಾಗೆಯೇ ನೈಋತ್ಯ ಮಾರುತಗಳು ಮಹಾರಾಷ್ಟ್ರದ ಪಶ್ಚಿಮ ಭಾಗವಾದ ಸಹ್ಯಾದ್ರಿಯ ಪಶ್ಚಿಮ ತಪ್ಪಲು ಮತ್ತು ತೀರ ಪ್ರದೇಶಕ್ಕೆ ಹೆಚ್ಚು ಮಳೆ ಸುರಿಯುತ್ತವೆ. ಈ ಪ್ರದೇಶದಲ್ಲಿ ಸುಮಾರು. 2.500ರಿಂದ 3.500ಮಿ.ಮೀ.ವರೆಗೆ ಮಳೆ ಬಿದ್ದಿರುವುದುಂಟು. ಆದರೆ ಇಲ್ಲಿಂದ ಪೂರ್ವಕ್ಕೆ ಹೋದಂತೆ ಮಳೆ ತೀರ ವಿರಳವಾಗುತ್ತದೆ. ಉದಾಹರಣೆಗೆ ಮಹಾಬಲೇಶ್ವರದಿಂದ ಕೇವಲ 15ಕಿಮೀ ದೂರದಲ್ಲಿರುವ ಪಾಂಚಗನಿ ಎಂಬಲ್ಲಿ 1.865ಮಿ.ಮೀ. ಆದರೆ ಅದಕ್ಕೆ ಸ್ವಲ್ಪದೂರದಲ್ಲಿರುವ ಫಾಲ್ಟನ್ ಎಂಬಲ್ಲಿ 500 ಮಿಮೀ ಮಳೆ ಬೀಳುತ್ತದೆ. ಕೊಂಕಣ ತೀರಪ್ರದೇಶದಲ್ಲಿ ಬೇಸಗೆಯಲ್ಲಿ ಉಷ್ಣತೆ 30ಡಿಗ್ರಿ. ಚಳಗಾಲದಲ್ಲಿ 24ಡಿಗ್ರಿ. ಇರುವುದು ಸಾಮಾನ್ಯ. ಎರಡು ಕಾಲಗಳಲ್ಲಿ ತೇವಾಂಶ ಸಾಮಾನ್ಯವಾಗಿ ಒಂದೇ ಬಗೆಯಲ್ಲಿ ಇರುತ್ತದೆ. ಅಕ್ಟೋಬರ್, ನವೆಂಬರ್, ತಿಂಗಳಲ್ಲಿ ಒಮ್ಮೊಮ್ಮೆ ಅರಬ್ಬೀ ಸಮುದ್ರದ ಕಡೆಯಿಂದ ಬೀಸುವ ಚಂಡಮಾರುತಕ್ಕೆ ಈ ಪ್ರದೇಶ ಸಿಕ್ಕಿ ಆ ಕಾಲದಲ್ಲಿ ಹೆಚ್ಚು ಮಳೆಯ ಹೊಡೆತಕ್ಕೆ ಈಡಾಗುವುದುಂಟು. ಸಹ್ಯಾದ್ರಿಯ ಗಿರಿಶ್ರೇಣಿ ಮತ್ತು ಅದರ ಆಸುಪಾಸಿನಲ್ಲಿರುವ ಪ್ರದೇಶಗಳಲ್ಲಿ ಮತ್ತು ಮಹಾಬಲೇಶ್ವರದಂಥ (1.682ಮೀ) ಎತ್ತರ ಪ್ರದೇಶಗಳಲ್ಲಿ ಹೆಚ್ಚು ಮಳೆ ಹಾಗೂ ಹೆಚ್ಚು ತಂಪಿನ ಹವಾಗುಣವಿದೆ. ಇಲ್ಲಿ ಉಷ್ಣತೆ ಏಪ್ರಿಲ್‍ನಲ್ಲಿ 24ಡಿಗ್ರಿ ಇದ್ದರೆ ಜನವರಿಯಲ್ಲಿ 18.7ಡಿಗ್ರಿ ಇರುತ್ತದೆ. ಮಹಾರಾಷ್ಟ್ರ ರಾಜ್ಯದ ವಿಸ್ತಾರಕ್ಕೆ ಅನುಗುಣವಾಗಿ ಮಳೆ ಮತ್ತು ವಾಯುಗುಣಗಳಲ್ಲಿ ಬದಲಾವಣೆಯನ್ನು ಗಮನಿಸಬಹುದು. ಈ ಬಗೆಯ ವ್ಯತ್ಯಾಸ ಅಲ್ಲಿಯ ಸಸ್ಯ ಸಮೃದ್ಧಿಯ ಮೇಲೂ ಜನಜೀವನದ ಮೇಲೂ ಪ್ರಭಾವ ಬೀರಿದ್ದು ಅವುಗಳಲ್ಲಿಯ ವೈವಿಧ್ಯವನ್ನು ಗುರುತಿಸಬಹುದು.

	ಸಸ್ಯ ಮತ್ತು ಪ್ರಾಣಿ ಜೀವನ: ಮಹಾರಾಷ್ಟ್ರದ ಅರಣ್ಯ ಸಂಪತ್ತು ಹೆಚ್ಚು ಆದಾಯ ತರುತ್ತಿದೆ, ಇದರಲ್ಲಿ ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳನ್ನು ಸಹ್ಯಾದ್ರಿಯ ಪಶ್ಚಿಮಕ್ಕಾದ ಹಾಗೆ ಸಾವಂತವಾಡಿ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಕಾಣಬಹುದು. ಇವುಗಳಲ್ಲಿ 45ಮೀ ಗಿಂತಲೂ ಎತ್ತರವಾದ ಮರಗಳು ಬೆಳೆಯುತ್ತವೆ. ಸುಮಾರು 3.300ಮಿಮೀ. ಮಳೆ ಬೀಳುವುದರಿಂದ ಹೆಚ್ಚು ತೇವಾಂಶದಿಂದ ಕೂಡಿರುವ ಈ ಪ್ರದೇಶದ ದಟ್ಟ ಕಾಡುಗಳಲ್ಲಿ ನಾಗಸಂಪಿಗೆ, ಬಳೀದೇವದಾರು, ಹಲಸು, ತೇಗ, ನೆಲ್ಲಿ, ಕದಂಬ, ಬೂರುಗ, ಜಾಂಬುಲ್, ಪೂನ್ ಮುಂತಾದ ಮರಗಳ ಜೊತೆಗೆ ಬಿದಿರು, ವಿವಿಧ ಬಗೆಯ ಬಳ್ಳಿಗಳು ಬೆಳೆಯುತ್ತವೆ. ಇದರ ಜೊತೆಗೆ ಮಳೆ ಮತ್ತು ಹವಾಗುಣವನ್ನು ಅನುಸರಿಸಿ ಬೆಳೆಯುವ ಎಲೆ ಉದುರುವ ಕಾಡುಗಳು ಮುಳ್ಳುಗಿಡ, ಪೊದೆ ಮತ್ತು ಮುತ್ತುಗ, ಎಲಚಿ, ಕಾಚು ಮುಂತಾದ ಗಿಡಗಳ ಕಾಡುಗಳೂ ಇವೆ. ತೀರ ಪ್ರದೇಶದಲ್ಲಿ ಮ್ಯಾಂಗ್ರೋವ್ ಜಾತಿಯ ಗುಲ್ಮವೃಕ್ಷಗಳು, ತೆಂಗು, ಹಲಸು, ಮಾವು ಈ ಬಗೆಯ ಸಸ್ಯ ಸಮೃದ್ಧಿಯನ್ನೂ ಕಾಣಬಹುದು, ಸುಮಾರು 63.065ಚ.ಕಿ.ಮೀ. ಅರಣ್ಯ ಪ್ರದೇಶವಿದ್ದು ರಾಜ್ಯದ ಒಟ್ಟು ವಿಸ್ತಾರದಲ್ಲಿ ಶೇಕಡ 21ರಷ್ಟು ಭಾಗ ಆವರಿಸಿದೆ. ಅರಣ್ಯ ಉತ್ಪನ್ನಗಳಲ್ಲಿ ತೇಗದಮರ, ಅಂಟು, ಬೊಂಬು, ನಾರು, ಮೇಣ, ಜೇನುತುಪ್ಪ ಮುಖ್ಯವಾದವು. ಹುಲಿ, ಚಿಂತೆ, ಕಾಡುಕೋಣ, ವಿವಿಧ ಬಗೆಯ ಜಿಂಕೆ ಸಾರಂಗಗಳು. ಕತ್ತೆ, ಕಿರುಬ, ಕಾಡುನಾಯಿ, ಕರಡಿ, ಮುಂತಾದವೂ ನವಿಲು. ಬಾತುಕೋಳಿ ಮುಂತಾದ ವಿವಿಧ ಜಾತಿಯ ಪಕ್ಷಿಗಳು. ಮಂಗಗಳೂ. ಹಾವುಗಳು ಈ ಅರಣ್ಯಗಳಲ್ಲಿವೆ. 

	ಜನ : ಮಹಾರಾಷ್ಟ್ರ ರಾಜ್ಯದಲ್ಲಿ ವಿವಿಧ ಬುಡಕಟ್ಟುಗಳ ಮಿಶ್ರ ಜನಾಂಗದವರು ಹೆಚ್ಚಾಗಿದ್ದಾರೆ. ವಲಸೆ ಬಂದ ಹೆಚ್ಚು ಜನ ಸ್ಥಳೀಯರೊಂದಿಗೆ ಬೆರೆತು ಹೋಗಿದ್ದಾರೆ. ಸಹ್ಯಾದ್ರಿ ಮತ್ತು ಸಾತ್ಪುರ ಗಿರಿಶ್ರೇಣಿಗಳ ಮೇಲೆ ಸುಮಾರು 24 ಲಕ್ಷಕ್ಕೂ ಹೆಚ್ಚುಮಂದಿ ಅಸ್ಟ್ರಲಾಯಿಡ್ ಸಂತತಿಯ ಮೂಲನಿವಾಸಿಗಳಾದ ಭಿಲ್ಲವರು. ವಾರ್ಲಿಸ್, ಗೊಂಡಾ, ಕಾರ್ಕುಸ್, ಮತ್ತು ಗೋವಾರಿಸ್ ಜನರಿದ್ದಾರೆ. ಅವರು ಕಪ್ಪು ಬಣ್ಣದವರು ಮತ್ತು ಕುಳ್ಳರು. ಅವರ ತಲೆಉದ್ದ, ಮೂಗು ಚಪ್ಪಟೆ, ಮಹಾರಾಷ್ಟ್ರದ ಎಲ್ಲೆಡೆ ಇರುವವರೆಂದರೆ ಕಂದುಬಣ್ಣದ ಮಧ್ಯಮ ಮೈಕಟ್ಟಿನ ಕುಂಬೀ ಮರಾಠರು, ಮೂಲನಿವಾಸಿಗಳ ಮತ್ತು ವಲಸೆ ಬಂದವರ ಚಿತ್ರ. ಮಹಾಲಕ್ಷ್ಮೀ ದೇವಾಲಯ ಕೊಲ್ಲಾಪುರ ಮಿಲನದಿಂದ ಅನೇಕ ಜಾತಿ, ಪಂಗಡಗಳು ಹುಟ್ಟಿಕೊಂಡಿವೆ. ಈ ಬಗೆಯ ಜನರನ್ನು ಹೆಚ್ಚಾಗಿ ರಾಜ್ಯದ ಪೂರ್ವ ಪ್ರದೇಶಗಳಲ್ಲಿ ಕಾಣಬಹುದು. 11ನೆಯ ಶತಮಾನದಲ್ಲಿ ತಮ್ಮ ಧರ್ಮರಕ್ಷಣೆಗಾಗಿ ಇರಾನ್‍ಬಿಟ್ಟು ಓಡಿಬಂದ ಎತ್ತರದ ನಿಲುವಿನ. ಸುಂದರ ಮೈಕಟ್ಟಿನ ಪಾರ್ಸಿಜನರೂ ಇಲ್ಲಿದ್ದಾರೆ. ಇವರಲ್ಲದೆ ಭಾರತದ ವಿವಿಧ ಭಾಗಗಳಿಂದ ನಾನಾ ಕಾರಣಗಳಿಂದಾಗಿ ಬಂದು ನೆಲಸಿದ ವಿವಿಧ ಜನರಿದ್ದಾರೆ. 

ಭಾಷೆ ಮತ್ತು ಧರ್ಮ : ಮರಾಠಿ ಭಾಷೆ. ಇದರ ಜೊತೆಗೆ, ಗುಜರಾತಿ, ಕನ್ನಡ, ಹಿಂದಿ, ಉರ್ದು, ತೆಲುಗು, ಸಿಂಧಿ, ಇಂಗ್ಲಿಷ್ ಬಳಕೆ ಬಾಷೆಗಳಲ್ಲಿ ಮುಖ್ಯವಾದವು. ಇವಲ್ಲದೆ ಕೊಂಕಣಿ, ಗೊಂಡಿ ಮತ್ತು ಮುಂಡಾರಿ ಭಾಷೆಗಳನ್ನೂ ಬಳಸುವ ಜನರಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 80 ಭಾಗ ಹಿಂದೂಧರ್ಮೀಯರು ಶೇಕಡ 8 ಭಾಗ ಮುಸ್ಲಿಮರೂ ಶೇಕಡ 7 ಭಾಗ ಬೌದ್ಧರೂ ಸಾಕಷ್ಟು ಮಂದಿ ಕ್ರಿಶ್ಚಿಯನ್ನರೂ ಸಿಕ್ಕರೂ ಜೈನಧರ್ಮೀಯರೂ ಇದ್ದಾರೆ.
ನೀರಾವರಿ ಮತ್ತು ವಿದ್ಯುತ್ತು : ಪಂಚವಾರ್ಷಿಕ ಯೋಜನೆಗಳಿಂದಾಗಿ ಈ ರಾಜ್ಯ ವಿದ್ಯುತ್ ಮತ್ತು ನೀರಾವರಿ ಅಭಿವೃದ್ಧಿ ಸಾಕಷ್ಟು ಸಾಧಿಸಿದೆ. ಭೀಮಾ ನದಿಯೋಜನೆ ಮತ್ತು ವಿದರ್ಭಪ್ರಾಂತ್ಯದಲ್ಲಿ ವೈನಗಂಗಾ ನದಿಯ ಉಪನದಿ ಇತಿಯಾದೊ ನದಿಯೋಜನೆ ಈ ರಾಜ್ಯದ ಮುಖ್ಯ ಯೋಜನೆಗಳು. ಇವಲ್ಲದೆ ನೀರಾನದಿ ಎಡ ಮತ್ತು ಬಲ ದಂಡೆ ಕಾಲುವೆಯೋಜನೆ, ಪ್ರವರನದಿ, ಗಂಗಾಪುರ, ಘಾಡ್, ವಿರ್, ಖಡಕ್‍ವಾಸ್ಲಾ ಮತ್ತು ಪೂರ್ಣ ಈ ನದಿಯೋಜನೆಗಳಿಂದ ಸಾಕಷ್ಟು ನೀರಾವರಿಯಾಗುತ್ತದೆ. ಒಟ್ಟಿನಲ್ಲಿ 1979-80ರಲ್ಲಿ 19.6 ಲಕ್ಷ ಹೆಕ್ಟೇರ್ ಭೂ ಪ್ರದೇಶ ನೀರಾವರಿಗೆ ಒಳಪಟ್ಟಿದ್ದು 24.4 ಲಕ್ಷ ಹೆಕ್ಟೇರುಗಳಲ್ಲಿ ಬಿತ್ತನೆ ಮಾಡಲಾಗಿತ್ತು. 2003ರ ಜೂನ್ ತಿಂಗಳ ಕೊನೆಯಲ್ಲಿ 32 ದೊಡ್ಡದಾದ, 178, ಮಧ್ಯಮವಾದ ಸುಮಾರು 2182 ರಾಜ್ಯದ ಸಣ್ಣ ನೀರಾವರಿ ಯೋಜನೆಗಳು ಪೂರ್ಣಗೊಂಡಿದ್ದವು. 21 ದೊಡ್ಡದಾದ 34 ಮಧ್ಯಮ ಗಾತ್ರದ ಯೋಜನೆಗಳು ಜಾರಿಯಲ್ಲಿದ್ದು ಕಾರ್ಯಾರಂಭವಾಗಿದ್ದವು. 2002-03ರಲ್ಲಿ ಒಟ್ಟು 36.68 ಲಕ್ಷ ಹೆಕ್ಟೇರುಗಳು ನೀರಾವರಿಗೆ ಒಳಪಟ್ಟಿತ್ತು. 

ಕೊಯ್ನಜಲವಿದ್ಯುತ್ ಮೂರು ಹಂತಗಳ ಯೋಜನೆಯಾಗಿದ್ದು ಕಾರ್ಯಮುಗಿದು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈಗ ಮಹಾರಾಷ್ಟ್ರ ರಾಜ್ಯ ವಿದ್ಯುತ್ ಮಂಡಳಿ ಅದರ ಕಾರ್ಯನಿರ್ವಹಿಸುತ್ತಿದೆ. ಉಳಿದ ಹಂತಗಳ ಕಾರ್ಯ ಪ್ರಗತಿಯಲ್ಲಿದೆ. ತಾರಾಪುರ ಪರಮಾಣು ವಿದ್ಯುತ್ ಕೇಂದ್ರದಲ್ಲಿ 420 ಮೆವಾ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಮಹಾರಾಷ್ಟ್ರ ಮೊದಲು ದಕ್ಷಿಣ ಆಫ್ರಿಕಾದಿಂದ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲನ್ನು ತರಿಸಿಕೊಳ್ಳುತ್ತಿತ್ತು. ಅನಂತರ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲನ್ನು ತರಿಸಿಕೊಳ್ಳುತ್ತಿದೆ. ಡೀಸೆಲ್ ತೈಲೋತ್ಪಾದಿತ ವಿದ್ಯುತ್ ಮೊದಲ ಬಳಕೆಯಾಗಿತ್ತು. ಇದರ ಜೊತೆಗೆ ಉಷ್ಣೋತ್ಪಾದಿತ ವಿದ್ಯುತ್ ಬಳಕೆಗೆ ಬಂತು. ಒಟ್ಟಿನಲ್ಲಿ 1982-83ರಲ್ಲಿ ಎಲ್ಲ ಬಗೆಯ ವಿದ್ಯುತ್ ಉತ್ಪಾದನೆ ಒಟ್ಟು 4686 ಮೆವಾ ಆಗಿತ್ತು. 1983 ತನಕ ಮಹಾರಾಷ್ಟ್ರದ 31.310 ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿತ್ತು. 2002-03ರಲ್ಲಿ ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆ 121,963 ಮೆ.ವ್ಯಾ.ಇತ್ತು.

ಖನಿಜಸಂಪತ್ತು : ವಿದರ್ಭಜಿಲ್ಲೆಯ ಪೂರ್ವಭಾಗದಲ್ಲಿ ಮತ್ತು ರತ್ನಗಿರಿ ಜಿಲ್ಲೆಯ ದಕ್ಷಿಣ ಪ್ರದೇಶದಲ್ಲಿ ಹೆಚ್ಚು ಉಪಯುಕ್ತವಾದ ಕಲ್ಲಿದ್ದಲು ಸಿಗುತ್ತದೆ. ಇಲ್ಲಿ ಸುಮಾರು 5000 ಮಿಲಿಯನ್ ಟನ್ನುಗಳಷ್ಟು ಕಲ್ಲಿದ್ದಲು ಸಂಗ್ರಹವಿದೆ ಎಂದು ಅಂದಾಜುಮಾಡಲಾಗಿದೆ. ಇವಲ್ಲದೆ ಕಬ್ಬಿಣದ ಅದುರು, ಚೀನಿಮಣ್ಣು, ಕಾಗೆಬಂಗಾರ, ಕ್ರೋಮೈಟ್, ಸುಣ್ಣಕಲ್ಲು, ಇಲ್ಮನೈಟ್, ಮ್ಯಾಂಗನೀಸ್, ಕೆಯೋಲಿನ್, ಬಾಕ್ಸೈಟ್, ಡಾಲೊಮೈಟ್, ಸಿಲಿಕ, ಓಕರ್, ಕುರಂದ, ಕಯೋನೈಟ್ ಮತ್ತು ಸಮುದ್ರ ಉಪ್ಪು ಇಲ್ಲ ದೊರೆಯುತ್ತವೆ. ನಾಗಪುರ, ಚಂದಾ, ಇಯೋತ್ಮಲ್ ಜಿಲ್ಲೆಗಳಲ್ಲಿ ಇದ್ದಲು ಹೆಚ್ಚಾಗಿದೆ. ಉತ್ಮ ಕಬ್ಬಿಣ ಅದುರು ರತ್ನಗಿರಿ ಚಂದಾ, ಮತ್ತು ಬಂದರಾ ಜಿಲ್ಲೆಗಳಲ್ಲಿದೆ. ಬಾಂದರಾ ಮತ್ತು ನಾಗಪುರ, ಜಿಲ್ಲೆಗಳಲ್ಲಿ ಮ್ಯಾಂಗನೀಸ್ ಅದುರು ನಿಕ್ಷೇಪವಿದೆ. ಚಂದಾ ಮತ್ತು ಇಯೋತ್ಮಲ್, ನಾಗಪುರ ಸಾಂಗ್ಲಿ, ನಾಂದೇಡ್, ರತ್ನಗಿರಿ, ಸಾಂಗ್ಲಿ ಮತ್ತು ಥಾನ ಜಿಲ್ಲೆಗಳಲ್ಲಿ ಬಾಕ್ಸೈಟ್ ಸಿಗುತ್ತದೆ, ಇವಲ್ಲದೆ ಈ ರಾಜ್ಯದ ಕೆಲವೆಡೆ ತಾಮ್ರ, ಟಂಗ್‍ಸ್ಟನ್, ಫೆಲ್ಸ್‍ಪಾರ್, ಬಸಾಲ್ಟ್, ಬೆಣಚುಕಲ್ಲು ಮುಂತಾದವೂ ದೊರೆಯುತ್ತವೆ. 1982ರಲ್ಲಿ 7,5983,000ಟನ್ನು, ಕಲ್ಲಿದ್ದಲ್ಲು, 786,000 ಟನ್ನು ಕಬ್ಬಿಣದ ಅದುರು, 871,000 ಟನ್ನು ಸುಣ್ಣಕಲ್ಲು, 237,000 ಟನ್ನು ಮ್ಯಾಂಗನೀಸ್ ಅದುರು, 348,000 ಟನ್ನು ಬಾಕ್ಸೈಟ್. 437,000 ಟನ್ನು ಉಪ್ಪು, 27,000ಟನ್ ಡಾಲೊವೈಟ್, 102,000 ಟನ್ ಸಿಲಿಕ, 15,000 ಟನ್ ಕಯೊನೈಟ್ ಉತ್ಪಾದಿಸಲಾಗಿತ್ತು. 

ಬೇಸಾಯ : ಮಹಾರಾಷ್ಟ್ರದ ಒಟ್ಟು ಜನ ಸಂಖ್ಯೆಯ ಶೇಕಡ 70 ಮಂದಿ ಗ್ರಾಮಾಂತರ ಪ್ರದೇಶಗಳಲ್ಲಿದ್ದು ಬೇಸಾಯವೇ ಅವರ ಜೀವನಾಧಾರ. ರಾಜ್ಯದ ಒಟ್ಟು 308 ಲಕ್ಷ ಹೆಕ್ಟೇರ್ ಭೂಮಿಯಲ್ಲಿ 201 ಲಕ್ಷ ಹೆಕ್ಟೇರ್ ಜಮೀನು ಬೇಸಾಯಯೋಗ್ಯ. ರಾಜ್ಯ 1/3 ಭಾಗ ಆಗಾಗ ಬರಗಾಲಕ್ಕೆ ಸಿಕ್ಕುವುದುಂಟು. ಬೇಸಾಯದ ಒಟ್ಟು ಭೂಮಿಯ ಶೇಕಡ 13 ಭಾಗಕ್ಕೆ ಮಾತ್ರ ನೀರಾವರಿ ಸೌಲಭ್ಯ ದೊರೆತಿದೆ. ಇಷ್ಟಿದ್ದರೂ ಬೇಸಾಯಲ್ಲಿ ಸಾಕಷ್ಟು ಪ್ರಗತಿಯಾಗಿದ್ದು 109.51 ಲಕ್ಷಟನ್‍ಗಳಷ್ಟು (1983-84) ಆಹಾರಧಾನ್ಯಗಳ ಉತ್ಪಾದನೆಯಾಗಿದೆ. ಬತ್ತ, ಹತ್ತಿ, ಗೋಧಿ, ಜೋಳ, ಸಜ್ಜೆ, ಕಡಲೆ, ತೈಲಧಾನ್ಯಗಳನ್ನು ಬೆಳೆಸುತ್ತಾರೆ. ಕಬ್ಬಿನ ಬೆಳೆ ಮತ್ತು ಸಕ್ಕರೆ ಉತ್ಪಾದನಾ ದೃಷ್ಟಿಯಿಂದ ಇಡೀ ಭಾರತದಲ್ಲಿ ಉತ್ತರ ಪ್ರದೇಶ ಮೊದಲಾದರೆ ಮಹಾರಾಷ್ಟ್ರ ಎರಡನೆಯದು. ರಾಜ್ಯದಲ್ಲಿ 297,000 ಹೆಕ್ಟೇರ್ ಭೂಮಿಯನ್ನು ಕಬ್ಬಿನ ಬೆಳೆಗೆ ಅಳವಡಿಸಲಾಗಿದ್ದು 3.026.125 ಟನ್ ಸಕ್ಕರೆ ಮತ್ತು 3.157 ಟನ್‍ಗಳಷ್ಟು ಬೆಲ್ಲದ ಉತ್ಪಾದನೆ ಆಗಿದೆ. ಮಿಶ್ರ ತಳಿಬಿತ್ತನೆ ಬೀಜಗಳ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಅಗ್ರಪಂಕ್ತಿಯಲ್ಲಿದೆ. ದೇಶದಲ್ಲಿ ಉತ್ಪಾದನೆಯಾಗುವ ಹೈಬ್ರಿಡ್ ಬೀಜಗಳ ಅರ್ಧದಷ್ಟು ಮಹಾರಾಷ್ಟ್ರರಾಜ್ಯ ಒಂದರಲ್ಲಿಯೇ ಉತ್ಪಾದನೆಯಾಗುತ್ತದೆ. ರಾಜ್ಯದಲ್ಲಿ 150 ಹೈಬ್ರಿಡ್ ಬೀಜ ಸಂಸ್ಕರಣ ಕೇಂದ್ರಗಳಿದ್ದು 2.61.350 ಕ್ವಿಂಟಾಲ್ ಬೀಜಗಳು ಸಂಸ್ಕರಣಗೊಂಡು ವಿತರಣೆಗೊಳ್ಳುತ್ತವೆ. 12.00 ಹೆಕ್ಟೇರ್ ಜಮೀನಿನಲ್ಲಿ 7.3 ದಶಲಕ್ಷ ಕೆಜಿ ಹೊಗೆಸೊಪ್ಪು ಬೆಳೆಯುತ್ತದೆ. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಹೆಚ್ಚಾಗಿ ಹತ್ತಿ ಮತ್ತು ಸೇಂಗಾ ಬೆಳೆಸುತ್ತಾರೆ. ಚಳಿಗಾಲದ ಬೆಳೆಯಲ್ಲಿ ಗೋಧಿ ಮುಖ್ಯವಾದದ್ದು. 100 ಸೆಂ.ಮೀ ಗಿಂತ ಹೆಚ್ಚಾಗಿ ಮಳೆ ಬೀಳುವಲ್ಲಿ ಬತ್ತ ಹೆಚ್ಚಾಗಿ ಬೆಳೆಸುತ್ತಾರೆ. ಮಾವು, ಬಾಳೆ, ತೆಂಗು, ಗೇರುಹಣ್ಣು ಮತ್ತು ಬೀಜ, ಕಿತ್ತಲೆಹಣ್ಣು, ಸಪೋಟ, ಸೀಬೆ ಮುಂತಾದ ವಿವಿಧ ಫಲಗಳನ್ನೂ ಸಾಕಷ್ಟು ಬೆಳೆಸುತ್ತಾರೆ. 

	ಮತ್ಸ್ಯೋದ್ಯಮ : 720 ಕಿಮೀ ಉದ್ದದ ತೀರವಿರುವ ಈ ರಾಜ್ಯದಲ್ಲಿ ಮೀನುಗಾರಿಕೆ ಒಂದು ಮುಖ್ಯ ಕಸುಬು, ಸುಮಾರು 70.000 ಮಂದಿ ಈ ಉದ್ಯೋಗವನ್ನು ಅವಲಂಬಿಸಿದ್ದಾರೆ. ಅರಬ್ಬೀ ಸಮುದ್ರ ಮತ್ತು ಒಳನಾಡಿನ ನದಿಗಳಿಂದ ಮೀನು ಹಿಡಿಯುತ್ತಾರೆ. 1980-81ರಲ್ಲಿ ಸುಮಾರು 374.000 ಟನ್ ಸಮುದ್ರ ಮೀನನ್ನೂ 25000 ಟನ್ ಒಳನಾಡಿನ ನದಿ ಮೀನನ್ನೂ ಹಿಡಿಯಲಾಗಿತ್ತು. 

	ಪಶುಪಾಲನೆ : ಈ ರಾಜ್ಯದಲ್ಲಿ ಹೈನುಗಾರಿಕೆ ಮನೆ ಮನೆಯಲ್ಲಿ ನಡೆಯುವುದರ ಜೊತೆಗೆ ಸಂಘಟಿತ ಸ್ವರೂಪದಲ್ಲಿಯೂ ನಡೆಯುತ್ತದೆ. ಮುಂಬಯಿ, ಪುಣೆ, ಧುಳೆ, ನಾಸಿಕ, ವಾಡಿ, ಮಹಾಡ, ರತ್ನಗಿರಿ, ಖಾಲಾಪುರ, ಚಿಪಳೂಣ, ಚಾಳೀಸ್‍ಗಾಂವ. ಅಹಮದ್‍ನಗೆ, ಸತಾರ, ಮಹಾಬಳೇಶ್ವರ, ಮೀರಜ್, ಸೊಲ್ಲಾಪುರ, ಕೊಲ್ಲಾಪುರ, ಗಾಗಪುರ, ಭೀಡ, ಔರಂಗಾಬಾದ್, ಚಂದ್ರಪುರ, ವಾರ್ಧಾ, ಅಮರಾವತಿ ಮುಂತಾದ 31 ಪಟ್ಟಣಗಳು ಹೈನುಗಾರಿಕೆಗೆ ಹೆಸರಾದುವು. ಇವುಗಳ ಹಾಲಿನ ಕೇಂದ್ರಗಳಿಂದ ಸರಾಸರಿ 23 ಲಕ್ಷ ಲೀಟರ್ ಹಾಲು ನಿತ್ಯ ಸಂಸ್ಕರಣಗೊಂಡು ರಾಜ್ಯದ ವಿವಿಧ ಭಾಗಗಳಿಗೆ ವಿತರಣೆಯಾಗುತ್ತದೆ. 1980ರ ಗಣತಿಯಂತೆ ಕುಕ್ಕುಟ ವರ್ಗಬಿಟ್ಟು ಹಸು, ಎತ್ತು, ಎಮ್ಮೆ, ಕುರಿ, ಆಡು ಮುಂತಾದ ಪ್ರಾಣಿಗಳ ಸಂಖ್ಯೆ ಸುಮಾರು 29.00.000 ಇತ್ತು. ಹಾಲು ಮತ್ತು ಅದರ ಉಪ ಉತ್ಪನ್ನಗಳು ಅನೇಕ ಮಂದಿಗೆ ಉದ್ಯೋಗ ಒದಗಿಸಿವೆ. 

	ಕೈಗಾರಿಕೆ : ಬಟ್ಟೆ, ಸಕ್ಕರೆ, ಆಹಾರ ಪದಾರ್ಥಗಳ ; ತಯಾರಿಕೆ, ವಿದ್ಯುತ್ ಉಪಕರಣ, ಪೆಟ್ರೋಲಿಯಮ್, ವಾಹನ ಮತ್ತು ಅವುಗಳ ಉಪಕರಣ, ರಬ್ಬರ್, ಕೈಗಾರಿಕೆಗಳಲ್ಲಿ ಬಳಕೆಗೆ ಬರುವ ರಾಸಾಯನಿಕಗಳು, ಬಣ್ಣ, ವಾರ್ನಿಷ್, ಮೇಣ ಮತ್ತು ರಾಸಾಯನಿಕ ಪದಾರ್ಥಗ:ಳ ಉತ್ಪಾದನೆ ಇಲ್ಲಿಯ ಪ್ರಮುಖ ಕೈಗಾರಿಕೆಗಳು. ಇಲ್ಲಿ 2.247 ಬಟ್ಟೆಯ ಗಿರಣಿಗಳೂ 784 ಉಣ್ಣೆ ಮತ್ತು ರೇಷ್ಮೆ ಗಿರಣಿಗಳೂ ಇವೆ. 1981ರಲ್ಲಿ ವಿವಿಧ ಪ್ರಕಾರದ ಒಟ್ಟು 19.409 ಗಿರಣಿ ಹಾಗೂ ಕಾರ್ಖಾನೆಗಳು ಇದ್ದುವು. ಇವುಗಳಲ್ಲಿ ದಿನವೊಂದಕ್ಕೆ 11.81.732 ಕಾರ್ಮಿಕರಿಗೆ ಉದ್ಯೋಗಾವಕಾಶ ನೀಡುವ ಸಾಮಥ್ರ್ಯವಿದೆ. ಬೆರಳಚ್ಚು ಯಂತ್ರ ತಯಾರಿಕೆ, ರೇಡಿಯೊ, ಲೇತ್‍ಯಂತ್ರಗಳು, ಶೀತಕಗಳು ಮುಂತಾದ ಕೆಲವು ಆಧುನಿಕ ಯಂತ್ರೋಪಕರಣಗಳು ಇಲ್ಲಿ ತಯಾರಾಗುತ್ತವೆ. ವಿವಿಧ ಬಗೆಯ ಔಷಧ, ಗೊಬ್ಬರ ತಯಾರಿಕಾ ಕಾರ್ಖಾನೆಗಳಿವೆ. ಇರುವ ಬಟ್ಟು ಗಿರಣಿ ಕಾರ್ಖಾನೆಗಳಲ್ಲಿ ಅರ್ಧದಷ್ಟು ಮುಂಬಯಿ ಮಹಾನಗರ ಹಾಗೂ ಅದರ ಪಕ್ಕದಲ್ಲಿರುವ ಥಾನ ಜಿಲ್ಲೆಯಲ್ಲಿವೆ. ಆಯಾ ಪ್ರಕಾರದ ಕೈಗಾರಿಕೆಯ ಅಭಿವೃದ್ಧಿಗೆ ನೆರವಾಗಲು ವಿವಿಧ ಸಂಘಟಿತ ಸಂಸ್ಥೆಗಳುಂಟು. ಉದಾಹರಣೆಗೆ ಮಹಾರಾಷ್ಟ್ರ ರಾಜ್ಯ ಕೈಮಗ್ಗ ಕೈಗಾರಿಕಾ ನಿಗಮ. ಮಹಾರಾಷ್ಟ್ರ ರಾಜ್ಯಕೈಗಾರಿಕಾಭಿವೃದ್ಧಿ ನಿಗಮ, ಮಹಾರಾಷ್ಟ್ರ ರಾಜ್ಯ ಹೈನುಗಾರಿಕೆ ನಿಗಮ ಇತ್ಯಾದಿ. ರಾಜ್ಯದಲ್ಲಿ ಒಟ್ಟು 77 ಕೈಗಾರಿಕಾ ವಸಾಹತುಗಳಿವೆ. ಕಾರ್ಮಿಕರ ಹಿತರಕ್ಷಣೆಗಾಗಿ 3.476 ನೋಂದಾಯಿಸಿರುವ ಕಾರ್ಮಿಕ ಸಂಘಗಳಿದ್ದು ಅವುಗಳಲ್ಲಿ 2.091.913 ಸದಸ್ಯರಿದ್ದಾರೆ.      	  (ಬಿ.ಎ.ಎಸ್.)

	ಈ ಕೈಗಾರಿಕೆಗಳ ಆರ್ಥಿಕ ಬಲಕ್ಕೆ ನೆರವಾಗುವಂಥ ದೊಡ್ಡ ದೊಡ್ಡ ಬ್ಯಾಂಕುಗಳೂ ವಿವಿಧ ಆರ್ಥಿಕ ಸಂಸ್ಥೆಗಳೂ ಇಲ್ಲಿವೆ. ಕೈಗಾರಿಕೆಗಳ ಅಭಿವೃದ್ಧಿಗೇ ಮೀಸಲಾದ ಹಣಕಾಸಿನ ನೆರವು ನೀಡಲು ಪ್ರತ್ಯೇಕ ನಿಗಮಗಳೂ ಸಂಸ್ಥೆಗಳೂ ಇವೆ. ಸರ್ಕಾರಿ, ಅರೆಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳಲ್ಲಿ ತಮ್ಮ ಆವಶ್ಯಕತೆಗೆ ತಕ್ಕಂತೆ ಹಣ ಒದಗಿಸಿಕೊಳ್ಳಲು ಇಲ್ಲಿ ಅವಕಾಶವಿದ್ದು ಕೈಗಾರಿಕೆಗಳ ಬೆಳವಣಿಗೆ ತೀವ್ರವಾಗಿ ನಡೆದಿದೆ. ಈ ರಾಜ್ಯ ಚಲನಚಿತ್ರ ತಯಾರಿಕೆಯಲ್ಲೂ ಪ್ರಸಿದ್ಧ. ಮುಂಬಯಿ ನಗರವನ್ನು ಭಾರತದ ಹಾಲಿವುಡ್ ಎಂದು ಕರೆಯುತ್ತಾರೆ. 

	ಸಾರಿಗೆ ಸಂಪರ್ಕ : ರಾಜ್ಯದಲ್ಲಿ ರೈಲು, ರಸ್ತೆ, ವಾಯು ಮತ್ತು ಜಲಮಾರ್ಗ ಸಂಪರ್ಕಗಳಿವೆ. ಮುಂಬಯಿಯನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯದಲ್ಲಿ ಬ್ರಾಡ್‍ಗೇಜ್ ಮತ್ತು ನ್ಯಾರೊಗೇಜ್ ಮಾರ್ಗಗಳು ಸೇರಿದಂತೆ ಒಟ್ಟು 5.193 ಕಿ.ಮೀ ರೈಲು ಮಾರ್ಗವಿದೆ. ಭಾರತದ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ರೈಲುಮಾರ್ಗಗಳು ವಾರ್ಧಾ ಮತ್ತು ನಾಗಪುರಗಳ ಮಧ್ಯೆ ಹಾದುಹೋಗಿವೆ. ವಿದ್ಯುತ್ ಮತ್ತು ಡೀಸೆಲ್ ಎಂಜಿನ್ನುಗಳ ಬಳಕೆಯಿದೆ. ಹವಾನಿಯಂತ್ರಿತ ರೈಲುಗಾಡಿಗಳೂ ಇವೆ. ಕೇಂದ್ರ ರೈಲು ವಿಭಾಗದ ಮುಖ್ಯ ಆಡಳಿತ ಕಚೇರಿ ಮುಂಬಯಿಯಲ್ಲಿದೆ. ಅದರ ಆಡಳಿತಕ್ಕೆ 6684 ಕಿಮೀ ರೈಲುಮಾರ್ಗ ಸೇರಿದೆ (1981). ಹಾಗೆಯೇ ಪಶ್ಚಿಮ ರೈಲ್ವೆಕೇಂದ್ರವೂ ಮುಂಬಯಿಯೇ ಆಗಿದ್ದು 10.339 ಕಿಮೀ (1981) ರೈಲುಮಾರ್ಗ ಈ ವಿಭಾಗಕ್ಕೆ ಸೇರಿದೆ. ಮುಂಬಯಿ, ಪುಣೆ, ಔರಂಗಾಬಾದ್, ನಾಗಪುರ, ವಾರ್ಧಾ, ಕೊಲ್ಲಾಪುರ, ಅಹಮದ್‍ನಗರ, ಜಲಗಾಂವ, ಧೂಲಿಯಾ ಮುಂತಾದ ರೈಲುಕೇಂದ್ರಗಳಿವೆ. ಇಲ್ಲಿಂದ ರಾಷ್ಟ್ರದ ಪೂರ್ವ, ದಕ್ಷಿಣ, ಉತ್ತರ, ಪಶ್ಚಿಮಕ್ಕೆಲ್ಲ ರೈಲುಸಂಪರ್ಕವಿದ್ದು ಪ್ರಮುಖ ನಗರಗಳಾದ ಬೆಂಗಳೂರು, ಮದ್ರಾಸ್, ಕಲ್ಕತ್ತ, ದೆಹಲಿ, ಹೈದರಾಬಾದ್‍ಗಳಿಗೆ ನಿಯತ ರೈಲು ಸಂಚಾರಿವಿದೆ. ನಗರ ಪಟ್ಟಣಗಳಿಗೂ ರಾಜ್ಯದ ಹೆದ್ದಾರಿಗಳಿಗೂ ಸುಮಾರು 8ಕಿಮೀ ದೂರದಲ್ಲಿರುವ ಎಲ್ಲ ಗ್ರಾಮಗಳಿಗೂ ರಸ್ತೆಸಂಪರ್ಕ ಕಲ್ಪಿಸಲಾಗಿದೆ. 86 ರಾಜ್ಯ ಹೆದ್ದಾರಿಗಳಿದ್ದು 10,528 ಕಿಮೀ ರಾಜ್ಯ ಹೆದ್ದಾರಿ ; 12,628 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳು ; 17.524 ಕಿಮೀ ಗ್ರಾಮರಸ್ತೆಗಳು ಇವೆ. ರಾಷ್ಟ್ರದ 5 ಹೆದ್ದಾರಿಗಳು ಈ ರಾಜ್ಯದಲ್ಲಿ 2400 ಕಿಮೀ ದೂರ ಹಾದುಹೋಗಿವೆ. ಇವು ದೆಹಲಿ, ಕಲ್ಕತ್ತ, ಅಲಹಾಬಾದ್ ಮತ್ತು ಬೆಂಗಳೂರು ನಗರಗಳನ್ನು ಸಂಪರ್ಕಿಸುತ್ತವೆ. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಜ್ಯದ ನಾನಾ ಕಡೆಗಳಿಗೆ ಮತ್ತು ಸುತ್ತಲಿನ ರಾಜ್ಯಗಳಿಗೆ ಬಸ್ಸುಗಳ ಸಂಪರ್ಕ ಕಲ್ಪಿಸಿದೆ. 
	

ಪಶ್ಚಿಮದಲ್ಲಿ 720 ಕಿಮೀ ಉದ್ದದ ಸಮುದ್ರ ತೀರವಿದ್ದರೂ ಉತ್ತಮ ಬಂದರುಗಳಿಲ್ಲ. ಮುಂಬಯಿ ಬಂದರನ್ನು ಬಿಟ್ಟರೆ ಮಿಕ್ಕವೆಲ್ಲ ಒಳನಾಡಿಗೆ ಸಂಪರ್ಕ ಕಲ್ಪಿಸಬಲ್ಲ ಸಮುದ್ರ ತೀರದ ಪುಟ್ಟ ರೇವುಗಳೇ ಹೊರತು ವ್ಯಾಪಾರಕ್ಕೆ, ದೊಡ್ಡ ಹಡಗುಗಳ ನಿಲ್ದಾಣಕ್ಕೆ ಅನುಕೂಲವಾಗಿಲ್ಲ. ಆದರೂ ಗುಜರಾತಿನಿಂದ ಹಿಡಿದು ಕರ್ನಾಟಕ-ಕೇರಳ ರಾಜ್ಯಗಳಿಗೆ ತೀರದಲ್ಲೇ ಸಂಚರಿಸುವ ಚಿಕ್ಕ ಹಡಗುಗಳ ಮೂಲಕ ವ್ಯಾಪಾರ ಮತ್ತು ಜನಸಾಗಣೆ ಕಾರ್ಯ ನಡೆಯುತ್ತಿದೆ. ಮುಂಬಯಿ ಹಡಗು ಕಟ್ಟೆ ಇಡೀ ಮಹಾರಾಷ್ಟ್ರ ರಾಜ್ಯದ ಪ್ರಮುಖ ಬಂದರು. ರೇವಾಸ್, ಮೊರದಾಂಬೋಲ್, ರತ್ನಗಿರಿ, ವಿಜಯದುರ್ಗ, ಮಲ್ವನ್ ಮತ್ತು ವೆಂಗುರ್ಲ ಇವು ಇತರೇ ಬಂದರುಗಳು. ಮಹಾರಾಷ್ಟ್ರ ರಾಜ್ಯದ ಸಮುದ್ರ ವ್ಯಾಪಾರ, ಜನ ಸಂಚಾರವೆಲ್ಲ ಹೆಚ್ಚಾಗಿ ಮುಂಬಯಿ ಬಂದರಿನಿಂದಲೇ ನಡೆಯುತ್ತದೆ. ಉಳಿದವು ಸ್ಥಳೀಯ ಅಗತ್ಯಗಳನ್ನು ಪೂರೈಸುತ್ತವೆ. 

	ವಾಯುಮಾರ್ಗದಲ್ಲೂ ಮಹಾರಾಷ್ಟ್ರ ರಾಜ್ಯ ಪ್ರಗತಿ ಸಾಧಿಸುತ್ತಿದೆ. ಮುಂಬಯಿ ಬಳಿಯ ಸಾಂತಕ್ರೂಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇದಲ್ಲದೆ ಔರಂಗಾಬಾದ್, ಪುಣೆ ನಾಗಪುರಗಳಲ್ಲಿ ಮುಖ್ಯ ವಿಮಾನ ನಿಲ್ದಾಣಗಳು ಇದ್ದು ದೇಶದ ಇತರ ಮುಖ್ಯ ನಗರಗಳಿಗೆ ಇಲ್ಲಿಂದ ವಿಮಾನ ಸಂಪರ್ಕವಿದೆ. ಜನಸಂಚಾರ ಮತ್ತು ವ್ಯಾಪಾರದ ದೃಷ್ಟಿಯಿಂದ ಮಹಾರಾಷ್ಟ್ರದ ವಾಯುಯಾನ ಬಹಳಷ್ಟು ಮುಂದುವರಿದಿದೆ. ಕಲ್ಕತ್ತ, ಮದ್ರಾಸ್, ಬೆಂಗಳೂರು, ಮಂಗಳೂರು, ದೆಹಲಿ, ಲಕ್ನೋ, ಭೋಪಾಲ್, ಅಹಮದಾಬಾದ್, ಹೈದರಾಬಾದ್, ಉದಯಪುರ, ಜೋಧಪುರ ಮುಂತಾದೆಡೆಗೆ ಇಲ್ಲಿಂದ ನೇರ ವಾಯುಮಾರ್ಗ ಸಂಪರ್ಕವಿದೆ. ಅಲ್ಲದೆ ಹೊರ ದೇಶಗಳಿಗೂ ಇಲ್ಲಿಂದ ವಿಮಾನ ಸೌಕರ್ಯವಿದೆ. ಮಹಾರಾಷ್ಟ್ರ ವ್ಯಾಪಾರ ವಾಣಿಜ್ಯ ಮತ್ತು ಸಂಪರ್ಕ ಕ್ಷೇತ್ರ ಅಭಿವೃದ್ಧಿಗೆ ಈ ವಿಮಾನ ಸಂಚಾರ ಸೌಲಭ್ಯದ ಕೊಡುಗೆಯೂ ಮುಖ್ಯವಾದದ್ದು. 

	2002 ಮಾರ್ಚಿಯಲ್ಲಿ 3,710 ಕಿ.ಮೀ ರಾಷ್ಟ್ರೀಯ ಹೆದ್ದಾರಿ, 33,705 ಕಿ.ಮೀ ರಾಜ್ಯ ಹೆದ್ದಾರಿ, 48,12 ಕಿ.ಮೀ ಜಿಲ್ಲಾ ಮುಖ್ಯರಸ್ತೆಗಳು, 44,183 ಇತರೇ ರಸ್ತೆಗಳು ಮತ್ತು 95,150 ಕಿ.ಮೀ ಗ್ರಾಮೀಣ ರಸ್ತೆಗಳಿದ್ದವು. ಮಹಾರಾಷ್ಟ್ರದಲ್ಲಿ 5,450 ಕಿ.ಮೀ. ರೈಲು ಮಾರ್ಗವಿದ್ದು ಇದರಲ್ಲಿ ಶೇ 78.4 ಬ್ರಾಡ್‍ಗೇಜ್, ಶೇ 8.1 ಮೀಟರ್‍ಗೇಜ್ ಮಾರ್ಗಗಳಿದ್ದವು. ರಾಜ್ಯದಲ್ಲಿ ಒಟ್ಟು 24 ವಿಮಾನ ನಿಲ್ದಾಣಗಳಿವೆ. ಒಟ್ಟು 50 ಬಂದರುಗಳಿವೆ.

	ಶಿಕ್ಷಣ : ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 47.18 (1981) ಮಂದಿ ಅಕ್ಷರಸ್ಥರು. ಓದು ಬರೆಹ ತಿಳಿದ ಹೆಚ್ಚಿನ ಜನ ನಗರವಾಸಿಗಳು. ಸ್ಥಾನಿಕ ಸಂಸ್ಥೆಗಳ ಮೂಲಕ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣಕ್ಕಾಗಿ ವಿಶೇಷ ಗಮನಹರಿಸಲಾಗಿದೆ. 1982-83ರಲ್ಲಿ ಒಟ್ಟು 52.209 ಪ್ರಾಥಮಿಕ ಶಾಲೆಗಳಿದ್ದು ಅವುಗಳಲ್ಲಿ 8.824.000 ವಿದ್ಯಾರ್ಥಿಸೇರಿದ್ದರು. ಸುಮಾರು 2.35.000ಜನ ಶಿಕ್ಷಕರು ಪ್ರಾಥಮಿಕ ಶಾಲೆಗಳಲ್ಲಿದ್ದಾರೆ. 360 ಶಿಕ್ಷಕ ತರಬೇತಿ ಕೇಂದ್ರಗಳು ರಾಜ್ಯದಲ್ಲಿವೆ. ಬೇಕಾಗುವ ಪಠ್ಯಪುಸ್ತಕಗಳ ಉತ್ಪಾದನೆ ಹಾಗೂ ವಿತರಣೆ ಮಾಡುತ್ತದೆ. ರಾಜ್ಯದಲ್ಲಿ ಮರಾಠಿ, ಗುಜರಾತಿ, ಉರ್ದು, ಸಿಂಧಿ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಪ್ರಾಥವಿಕ ಹಾಗೂ ಮಾಧ್ಯಮಿಕ ಶಾಲೆಗಳುಂಟು. ರಾಜ್ಯದಲ್ಲಿ 6.989 ಮಾಧ್ಯಮಿಕಶಾಲೆಗಳಿವೆ. ಈ ಶಾಲೆಗಳಲ್ಲಿ ಸುಮಾರು 1.30.000 ಶಿಕ್ಷಕರಿದ್ದಾರೆ. ರಾಜ್ಯದಲ್ಲಿ ಒಟ್ಟು 57 ಮಾಧ್ಯಮಿಕ ಶಿಕ್ಷಕರ ತರಬೇತಿ ಕಾಲೇಜುಗಳಿದ್ದು ಅವುಗಳಲ್ಲಿ ಪ್ರತಿವರ್ಷ 8000 ಶಿಕ್ಷಕರಿಗೆ ತರಬೇತಿ ದೊರೆಯುತ್ತದೆ. ಈ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಮಾಧ್ಯಮಿಕ ಶಾಲೆಯವರೆಗೂ ಉಚಿತಶಿಕ್ಷಣವಿದೆ. ಆದಿವಾಸಿ ಮಕ್ಕಳಿಗಾಗಿ ಆಶ್ರಮಶಾಲೆಗಳ ವ್ಯವಸ್ಥೆಯಿದ್ದು ಅವರು ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವನ್ನು ನೀಡಲಾಗುತ್ತದೆ. 

	ರಾಜ್ಯದಲ್ಲಿ ಒಟ್ಟು 705 ಕಾಲೇಜುಗಳಿದ್ದು ಪ್ರತಿವರ್ಷ 614,097 ವಿದ್ಯಾರ್ಥಿಗಳು ಉಚ್ಚಶಿಕ್ಷಣ ಪಡೆಯುತ್ತಾರೆ, ಔದ್ಯೋಗಿಕ ಹಾಗೂ ವಿಶೇಷ ಶಿಕ್ಷಣ ವ್ಯವಸ್ಥೆಯುಳ್ಳ 1.271 ಕೇಂದ್ರಗಳಿದ್ದು 127.392 ಯುವಕ-ಯುವತಿಯರು ಅಲ್ಲಿ ತರಬೇತಿ ಪಡೆಯುವರು. ರಾಜ್ಯದಲ್ಲಿ ಒಟ್ಟು 15 ಎಂಜಿನಿಯರಿಂಗ್ ಕಾಲೇಜುಗಳೂ 37 ಪಾಲಿಟೆಕ್ನಿಕ್‍ಗಳೂ 41 ಇತರ ಡಿಪ್ಲೊಮ ಸಂಸ್ಥೆಗಳೂ 182 ತಾಂತ್ರಿಕ ಶಿಕ್ಷಣ ಶಾಲೆಗಳೂ 80 ಔದ್ಯೋಗಿಕ ತರಬೇತಿ ಕೇಂದ್ರಗಳೂ ಉಂಟು. ರಾಜ್ಯದಲ್ಲಿ ಒಟ್ಟು 20 ವೈದ್ಯಕೀಯ ಕಾಲೇಜುಗಳಿದ್ದು ಅವುಗಳ ಪೈಕಿ 11 ಕಾಲೇಜುಗಳನ್ನು ಸರ್ಕಾರದ ವತಿಯಿಂದ ನಡೆಸಲಾಗುತ್ತಿದೆ. ಈ ಕಾಲೇಜುಗಳಲ್ಲಿ ಪ್ರತಿವರ್ಷ ಸುಮಾರು 1600 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಈ ವೈದ್ಯಕೀಯ ಕಾಲೇಜುಗಳಲ್ಲಿ ನಾಲ್ಕು ದಂತಶಾಸ್ತ್ರದ ಕಾಲೇಜುಗಳು ಸೇರಿವೆ. ಮುಂಬಯಿ, ನಾಂದೇಡ್, ನಾಗಪುರಗಳಲ್ಲಿ ಸರ್ಕಾರೀ ಆಯುರ್ವೇದ ಕಾಲೇಜುಗಳೂ ಇನ್ನಿತರ 15 ಪಟ್ಟಣಗಳಲ್ಲಿ ಖಾಸಗೀ ಆಯುರ್ವೇದ ಕಾಲೇಜುಗಳೂ ಇದ್ದು ಈ ಎಲ್ಲ ಕಾಲೇಜುಗಳಲ್ಲಿ ಪ್ರತಿವರ್ಷ 920 ವಿದ್ಯಾರ್ಥಿಗಳು ಪ್ರವೇಶ ಪಡೆಯಬಲ್ಲರು. ಇವಲ್ಲದೆ ಪ್ರತಿವರ್ಷ 1.500 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ 28 ಖಾಸಗೀ ಹೋಮಿಯೋಪತಿಕ್ ಕಾಲೇಜುಗಳೂ 140 ವಿದ್ಯಾರ್ಥಿಗಳಿಗೆ ಶಿಕ್ಷಣನೀಡುವ 3 ಯುನಾನೀ ಕಾಲೇಜುಗಳೂ ಇವೆ. 

	ರಾಜ್ಯದಲ್ಲಿ ಹತ್ತು ವಿಶ್ವವಿದ್ಯಾಲಯಗಳಿವೆ. ಅವುಗಳಲ್ಲಿ ಬಲು ಹಳೆಯದೂ ಪ್ರಸಿದ್ಧವಾದದ್ದೂ ಮುಂಬಯಿ ವಿಶ್ವವಿದ್ಯಾಲಯ. ಇದರ ಸ್ಥಾಪನೆ 1857ರಲ್ಲಿ. ಅನಂತರ ಸ್ಥಾಪನೆಯಾದವು ನಾಗಪುರ ವಿಶ್ವವಿದ್ಯಾಲಯ (1925); ಪುಣೆ ವಿಶ್ವವಿದ್ಯಾಲಯ, ಔರಂಗಾಬಾದ್ (1948); ಶ್ರೀಮತಿ ನಾಥಿಬಾಯಿ ದಾಮೋದರ ಥಾಕಸ್ರ್ಥೆ ಮಹಿಳೆಯರ ವಿಶ್ವವಿದ್ಯಾಲಯ, ಮುಂಬಯಿ (1949); ಶಿವಾಜಿ ವಿಶ್ವವಿದ್ಯಾಲಯ. ಕೊಲ್ಲಾಪುರ (1963); ಮಹಾತ್ಮಾಫುಲೆ ಕೃಷಿ ವಿಶ್ವ ವಿದ್ಯಾಲಯ, ರಾಹುರಿ. ಅಹಮ್ಮದ್‍ನಗರ (1968); ಪಂಜಾಬರಾವ್‍ದೇಶಮುಖ್ ಕೃಷಿ ವಿಶ್ವವಿದ್ಯಾಲಯ (ಕೃಷಿ ವಿದ್ಯಾಪೀಠ) ದಾಮೀಲಿ, ರತ್ನಗಿರಿ (1972), ಮರಾಠ ವಾಡಾ ಕೃಷಿ ವಿದ್ಯಾಲಯ, ಪರಭಣಿ (1972). ಒಟ್ಟಿನಲ್ಲಿ ಮಹಾರಾಷ್ಟ್ರದ ಶಿಕ್ಷಣ ಕ್ಷೇತ್ರ ಪ್ರಗತಿದಾಯಕವಾಗಿದೆ.

	ಆರೋಗ್ಯ : ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಆಸ್ಪತ್ರೆಗಳಿರುವುದಲ್ಲದೆ. ಗ್ರಾಮಾಂತರ ಪ್ರದೇಶಗಳಲ್ಲಿ 1983-84ರಲ್ಲಿ 1.539 ಪ್ರಾಥಮಿಕ ಆರೋಗ್ಯಕೇಂದ್ರಗಳೂ 6.391 ಉಪಕೇಂದ್ರಗಳೂ 931 ಆಸ್ಪತ್ರೆಗಳೂ 318 ಕುಟುಂಬ ಕಲ್ಯಾಣಕೇಂದ್ರಗಳೂ 147 ಗ್ರಾಮಾಂತರ ಕುಟೀರ ಆಸ್ಪತ್ರೆಗಳೂ ಕಾರ್ಯನಿರತವಾಗಿದ್ದವು. 10.000 ಜನಸಂಖ್ಯೆಗೆ ಒಬ್ಬರಂತೆ ಗ್ರಾಮಗಳಲ್ಲಿ ಆರೋಗ್ಯ ಸೇವಕರನ್ನು ನಿಯಮಿಸಲಾಗಿದೆ. ಜನರ ಸರಾಸರಿ ಆಯುಷ್ಯ 59ವರ್ಷ. ಮಕ್ಕಳ ಅಕಾಲ ಮೃತ್ಯುವಿನ ಪ್ರಮಾಣ 1000ಕ್ಕೆ 177ರಿಂದ 61 ಇಳಿದಿದೆ. ಕುಟುಂಬಕಲ್ಯಾಣ ಯೋಜನೆಯ ಪ್ರಚಾರದಿಂದ ಜನನ ಪ್ರಮಾಣ ಪ್ರತಿ ಸಾವಿರಕ್ಕೆ 41ರಿಂದ 28ಕ್ಕೆ ಇಳಿದಿದೆ. ಮರಣ ಪ್ರಮಾಣ 18ರಿಂದ 8.7ಕ್ಕೆ ಇಳಿದಿದೆ. ರಾಜ್ಯದಲ್ಲಿ 46 ಮಲ್ಭೇರಿಯಾ ನಿಯಂತ್ರಣ ಕೇಂದ್ರಗಳೂ 42 ಕುಷ್ಠ ರೋಗನಿಯಂತ್ರಣ ಕೇಂದ್ರಗಳೂ 36 ಕ್ಷಯ ರೋಗ ಕೇಂದ್ರಗಳೂ ಇವೆ.

	ಸಹಕಾರ ಚಳವಳಿ : ಬೇಸಾಯದ ಅಭಿವೃದ್ಧಿಗೂ ಸಹಕಾರೀ ಚಳವಳಿಗೂ ಪರಸ್ಪರ ಸಂಬಂಧವಿದೆ. ಅಂತೆಯೇ ಈ ರಾಜ್ಯದಲ್ಲಿ ಭರದಿಂದ ನಡೆದ ಬೇಸಾಯ ಪ್ರಗತಿಗೆ ಸರಿಸಾಟಿಯಾಗಿ ಸಹಕಾರಿ ಕ್ಷೇತ್ರದ ಪ್ರಗತಿಯೂ ಆಗಿದೆ. ರಾಜ್ಯದಲ್ಲಿ 18.521 ಬೇಸಾಯ ಸಹಕಾರಿ ಸಂಘಗಳೂ 6.359 ಬೇಸಾಯೇತರ ಸಹಕಾರಿ ಸಂಘಗಳೂ 501 ಸಹಕಾರಿ ಮಾರುಕಟ್ಟೆಗಳೂ 17.767 ಸಕ್ಕರೆ ಕಾರ್ಖಾನೆ ಮತ್ತು ಬಟ್ಟೆ ಗಿರಣಿಗಳ ಸಹಕಾರಿ ಉತ್ಪಾದಕ ಘಟಕಗಳೂ 27,949 ಗ್ರಾಹಕ, ಗೃಹ ನಿರ್ಮಾಣಗಳಂಥ ಸಾರ್ವಜನಿಕ ಸೇವಾ ಸಹಕಾರಿ ಸಂಘಗಳೂ ಕಾರ್ಯನಿರತವಾಗಿವೆ. ಇಡೀ ರಾಷ್ಟ್ರದ ಸಹಕಾರ ಸಂಘಗಳ ಶೇಕಡ 19ರಷ್ಟು ಅಂದರೆ 71,130 ಸಂಘಗಳು ಈ ರಾಜ್ಯದಲ್ಲಿವೆ ಸದಸ್ಯರ ಸಂಖ್ಯೆ 180 ಲಕ್ಷ.

	ಪ್ರೇಕ್ಷಣೀಯ ಸ್ಥಳಗಳು : ಮಹಾರಾಷ್ಟ್ರದ ಐತಿಹಾಸಿಕ ಕೋಟೆ ಕೊತ್ತಳೆಗಳಲ್ಲಿ ಕೊಂಕಣ ತೀರದಲ್ಲಿರುವ ಜಂಜೀರ ದ್ವೀಪ ಕೋಟೆಗಳು, ಅಹಮ್ಮದ್‍ನಗರ, ಸೊಲ್ಲಾಪುರ, ಚಾಕರಣ, ಓಸಾ ಇಲ್ಲಿರುವ ಸಮನೆಲದ ಮೇಲಿರುವ ಕೋಟೆಗಳು, ರಾಯಗಡ, ಸಿಂಹಗಡ, ಪುರಂಧರಗಡ, ಪ್ರತಾಪಪಗಡ, ಪನ್ವೆಲ, ಸುಜ್ಜಾದುರ್ಗ, ವಿಜಯದುರ್ಗ ಮುಂತಾದ ಜಲದುರ್ಗಗಳು ಪ್ರೇಕ್ಷಣೀಯವಾದವು. ಅಹಮ್ಮದ್‍ನಗರ ಕೋಟೆಯನ್ನು ಭಾರತದ ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಸೆರೆಮನೆಯಾಗಿ ಉಪಯೋಗಿಸಲಾಗುತ್ತಿತ್ತು, ದಿವಂಗತ ಜವಹರಲಾಲ್ ನೆಹರು ಅವರು ಈ ಅಹಮ್ಮದ್‍ನಗರದ ಕೋಟೆ ಜೇಲಿನಲ್ಲಿರುವಾಗಲೇ ಅವರ ಪ್ರಸಿದ್ಧ ಗ್ರಂಥ ಡಿಸ್ಕವರಿ ಆಫ್ ಇಂಡಿಯಾ (1946) ಬರೆದದ್ದು. ಎಲ್ಲೋರ ಅಜಂತಾ ಗುಹೆಗಳು ಜಗತ್ಪ್ರಸಿದ್ಧವಾದವು. ಅಜಂತಾ ಗುಹೆಗಳಲ್ಲಿ ಬುದ್ಧನ ಜೀವನ ಹಾಗೂ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಚಿತ್ರಕಲೆಯ ಅಮರವೈಖರಿಯನ್ನು ಕಾಣಬಹುದು. ಎಲ್ಲೋರಾದಲ್ಲಿರುವ ಕೈಲಾಸಮಂದಿರ ಒಂದೇ ಶಿಲೆಯಲ್ಲಿ ರಚಿಸಿರುವ ಭವ್ಯಮಂದಿರವಾಗಿದ್ದು ಪ್ರೇಕ್ಷಕರನ್ನು ಮುಗ್ಧರನ್ನಾಗಿಸುತ್ತದೆ. ಮಹಾಡಪಾಲಿ, ಲೇನ್ಯಾದ್ರಿ, ಓಝಾರ್, ಧೇಯುರ್, ರಂಜನಗಾಂವ್, ಮೋರೆಗಾಂವ್, ಸಿದ್ದಟೇಕ್ ಮುಂತಾದ ಸ್ಥಳಗಳಲ್ಲಿಯ ಅಷ್ಟ ವಿನಾಯಕ ಮುಂದಿರಗಳು ನೋಡತಕ್ಕವು. ರತ್ನಗಿರಿ ಜಿಲ್ಲೆಯಲ್ಲಿ ಪ್ರತಿ ಗಣಪತಿ ಮಂದಿರವನ್ನೂ ಸಮುದ್ರತೀರದ ಒಂದು ಬಂಡೆಗಲ್ಲಿನ ಮೇಲೆ ಕಟ್ಟಲಾಗಿದೆ. ಪಂಡರಾಪುರ ಕ್ಷೇತ್ರ ಬಲು ಪವಿತ್ರವೆನಿಸಿದೆ. ಸಂತ ಜ್ಞಾನೇಶ್ವರರ ಕಾರ್ಯಕ್ಷೇತ್ರ ಅಳಂದಿ ಇಂದಿಗೂ ಜನರನ್ನು ಆಕರ್ಷಿಸುತ್ತದೆ. ಅಂಬೆಜೋಗಾಯಿ, ಔದುಂಬರ, ದೇಹು, ಮಾಹುಲೆ ಜೇಹುನಿ, ನೇವಾನ್, ಪೈರಣ, ಶೇಗಾಂವ್, ಶಿರಡಿ ಮುಂತಾದುವು ಮಹಾರಾಷ್ಟ್ರದಲ್ಲಿರುವ ತೀರ್ಥಕ್ಷೇತ್ರಗಳು. ಇವಲ್ಲದೆ ನಾಂದೇಡದಲ್ಲಿರುವ ಗುರುದ್ವಾರ, ಉಲ್ಲಾಸನಗರದ ಹಾಜಿಮಂಲಂಗ್ ದರ್ಗಾ, ಮುಂಬಯಿಯಸೇಂಟ್ ಮೇರಿ ಚರ್ಚ್ ಇತ್ಯಾದಿ ಸ್ಥಳಗಳು ವಿವಿಧ ಮತೀಯರನ್ನು ಆಕರ್ಷಿಸುತ್ತವೆ. 

	ಭಂಡಾರಾ ಜಿಲ್ಲೆಯಲ್ಲಿರುವ ನಾಗಝಣ ಕಾಡುಪ್ರಾಣಿ ಹಾಗೂ ನೀರಿನ ಮೇಲೆಯೇ ಬದುಕಿರುವ ನೀರ್ವಕ್ಕಿಗಳಿಗೆ ಹೆಸರಾಗಿದೆ. ಧೂಳೆ ಜಿಲ್ಲೆಯ ತೋರಣ ಮಲ್ಲ ಹಾಗೂ ಅಕೋಲಾ ಜಿಲ್ಲೆಯಲ್ಲಿರುವ ನರಹಾಲಾ ಇವು ಕಾಡು ಪ್ರಾಣಿಗಳಿಗಾಗಿ ಕಾದಿರಿಸಿದ ಪ್ರದೇಶಗಳು. ಮಾಥೇರಾನ್ ಮತ್ತು ಮಹಾಬಲೇಶ್ವರ ಜನಪ್ರಿಯ ಗಿರಿಧಾಮಗಳು. ಇವಲ್ಲದೆ ಮುಂಬಯಿ, ಪುಣೆ, ನಾಸಿಕ, ಔರಂಗಾಬಾದ್ ಇತ್ಯಾದಿ ನಗರಗಳಲ್ಲಿ ಅನೇಕ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳೂ ಸ್ಮಾರಕ ಕಟ್ಟಡಗಳೂ ಇವೆ. 

	ಆಡಳಿತ : 1960ಮೇ 1ರಂದು ಹೈದರಾಬಾದ್ ಸಂಸ್ಥಾನಕ್ಕೆ ಸೇರಿದ್ದ ಮರಾಠವಾಡಾ ಹಾಗೂ ಮಧ್ಯಪ್ರದೇಶದಲ್ಲಿದ್ದ ವಿದರ್ಭ ವಿಭಾಗಗಳನ್ನೊಳಗೊಂಡು ಮಹಾರಾಷ್ಟ್ರ ರಾಜ್ಯ ಅಸ್ತಿತ್ವಕ್ಕೆ ಬಂತು. ಆಗ ಈ ರಾಜ್ಯದಲ್ಲಿ ಒಟ್ಟು 26 ಜಿಲ್ಲೆಗಳಿದ್ದುವು ಮುಂದೆ ಆಡಳಿತದ ಅನುಕೂಲತೆಯ ದೃಷ್ಟಿಯಿಂದ 1981 ಮೇ ತಿಂಗಳಲ್ಲಿ ಸಿಂಧುದುರ್ಗ ಮತ್ತು ಜಾಲ್ನಾ ಜಿಲ್ಲೆಗಳನ್ನೂ 1982 ಆಗಸ್ಟ್ ತಂಗಳಲ್ಲಿ ಲಾತೂರ್ ಮತ್ತು ಗಡಚಿರೋಲಿ ಜಿಲ್ಲೆಗಳನ್ನೂ ರಚಿಸಲಾಯಿತು. ಹೀಗೆ ಈ ರಾಜ್ಯದಲ್ಲೀಗ ಒಟ್ಟು 30 ಜಿಲ್ಲೆಗಳು ಇವೆ. ಈ ಜಿಲ್ಲೆಗಳ ಆಡಳಿತ ಹೊಣೆ ಜಿಲ್ಲಾಧಿಕಾರಿಗಳದಾದರೆ ಆಯಾ ಜಿಲ್ಲೆಯ ಅಭಿವೃದ್ಧಿ ಕಾರ್ಯ ಮತ್ತು ಯೋಜನೆಗಳನ್ನು ಹಾಗೂ ಗ್ರಾಮ ವಿಕಾಸದ ಹೊಣೆಯನ್ನು ಜಿಲ್ಲಾ ಪರಿಷತ್ತುಗಳು ನೋಡಿಕೊಳ್ಳುವುವು. ಆಡಳಿತಾಧಿಕಾರಗಳ ಮತ್ತು ಅಭಿವೃದ್ಧಿ ಯೋಜನೆಗಳ ವಿಕೇಂದ್ರೀಕರಣದ ಪರಿಣಾಮವಾಗಿ ರೂಪುಗೊಂಡ ಪಂಚಾಯಿತಿ ರಾಜ್ಯದಲ್ಲಿಯ ಒಟ್ಟು 30 ಜಿಲ್ಲಾ ಪರಿಷತ್ತುಗಳೂ 296 ಪಂಚಾಯಿತಿ ಸಮಿತಿಗಳೂ 24.426 ಗ್ರಾಮ ಪಂಚಾಯಿತಿಗಳಲ್ಲಿ ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿವೆ. ಮುಂಬಯಿ, ಥಾಣೆ, ಪುಣೆ, ಸೊಲ್ಲಾಪುರ, ನಾಗಪುರ, ಕೊಲ್ಲಾಪುರ, ನಾಸಿಕ್ ಮತ್ತು ಪಿಂಪರಿ-ಚಿಂಚವಾಡಗಳಲ್ಲಿ ಮಹಾನಗರಪಾಲಿಕೆಗಳೂ ಉಳಿದ ಪಟ್ಟಣಗಳಲ್ಲಿ ನಗರಪಾಲಿಕೆಗಳೂ ನಗರಾಡಳಿತ ನಿರ್ವಹಿಸುತ್ತಿವೆ. ಭಾರತದ ಒಂದು ರಾಜ್ಯವಾಗಿ ಮಹಾರಾಷ್ಟ್ರ ರಾಜ್ಯ ಸಂವಿಧಾನಾತ್ಮಕವಾಗಿ ಚುನಾಯಿತ ಸದಸ್ಯರಿಂದ ಕೂಡಿದ ವಿಧಾನಸಭಾ ಮತ್ತು ವಿಧಾನ ಪರಿಷತ್ತುಗಳನ್ನೊಳಗೊಂಡಿದೆ. ಮಂತ್ರಿ ಮಂಡಲ ಮತ್ತು ರಾಜ್ಯಪಾಲರು ಕಾರ್ಯಾಂಗ, ನ್ಯಾಯಾಂಗ ಮತ್ತು ಆಡಳಿತಾಂಗಗಳ ವರಿಷ್ಠರಾಗಿರುವರು. ಆಡಳಿತಾನುಕೂಲಕ್ಕೆ ರಾಜ್ಯವನ್ನು ಜಿಲ್ಲೆ ಮತ್ತು ಅದರ ಘಟಕಗಳಾಗಿ ವಿಂಗಡಿಸಲಾಗಿದೆ.

ಕ್ರಮ
ಸಂಖ್ಯೆ
ಜಿಲ್ಲೆ
ವಿಸ್ತಾರ ಚ.ಕಿ.ಮೀ
ಜನಸಂಖ್ಯೆ 2001
ಆಡಳಿತ ಕೇಂದ್ರ

 1
 2
 3
 4
 5
 6
 7
 8
 9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
ಅಹಮ್ಮದ್‍ನಗರ್
ಅಕೋಲ
ಅಮರಾವತಿ
ಔರಂಗಾಬಾದ್
ಬಾಂದ್ರ
ಬೀಡ್
ಮುಂಬಯಿನಗರ
ಮುಂಬಯಿ ಹೊರವಲಯ
ಬುಲ್ದಾನ್
ಚಂದ್ರಾಪುರ
ಧುಲೆ
ಗಡಚಿರೋಲಿ
ಜಲಗಾಂವ್
ಜಾಲ್ನ
ಕೊಲ್ಲಾಪುರ
ಲಾತೂರ್
ನಾಗಪುರ
ನಾಂದೇಡ್
ನಾಸಿಕ್
ಉಸ್ಮನಾಬಾದ್
ಪರಭಾನಿ
ಪುಣೆ
ರೈಗಾದ್
ರತ್ನಗಿರಿ
ಸಾಂಗ್ಲಿ
ಸತಾರ
ಸಿಂಧುದುರ್ಗ
ಸೋಲಾಪುರ್
ಠಾಣೆ
ವಾರ್ಧಾ
ಯವತ್‍ಮಾಲ್
ನಂದರ್ ಬಾರ್
ವಾಸಿಂ
ಗೊಂಡಿಯ
ಹಿಂಗೊಲಿ
17,034
5,431
12,235
10,106
3,890
10,692
157
446
9,680
11,417
8,061
14,477
11,757
7,715
7,692
7,166
9,810
10,545
15,539
7,550
6,511
15,637
7,162
8,196
8,577
10,475
5,222
14,886
9,563
6,311
13,594
5,035
5,150
5,430
4,526
40,88,077
16,29,305
26,06,063
29,20,548
11,35,835
21,59,841
33,26,837
85,87,561
22,26,328
20,77,909
17,08,993
9,69,960
36,79,936
16,12,357
35,15,413
20,78,237
40,51,444
28,68,158
49,87,923
14,72,256
14,91,109
72,24,224
22,05,972
16,96,482
25,81,835
27,96,906
8,61,672
38,55,383
81,28,833
12,30,640
24,60,482
13,09,135
10,19,725
12,00,151
9,86,717
ಅಹಮ್ಮದ್‍ನಗರ್
ಅಕೋಲ
ಅಮರಾವತಿ
ಔರಂಗಾಬಾದ್
ಬಾಂದ್ರ
ಬೀಡ್
ಮುಂಬಯಿ
ಬಾಂದ್ರ
ಬುಲ್ದಾನ್
ಚಂದ್ರಾಪುರ
ಧುಲೆ
ಗಡಚಿರೋಲಿ
ಜಲಗಾಂವ್
ಜಾಲ್ನ
ಕೊಲ್ಲಾಪುರ
ಲಾತೂರ್
ನಾಗಪುರ
ನಾಂದೇಡ್
ನಾಸಿಕ್
ಉಸ್ಮನಾಬಾದ್
ಪರಭಾನಿ
ಪುಣೆ
ಆಲಿಗ್‍ಬಾಗ್
ರತ್ನಗಿರಿ
ಸಾಂಗ್ಲಿ
ಸತಾರ
ಓರಸ್
ಸೋಲಾಪುರ್
ಠಾಣೆ
ವಾರ್ಧಾ
ಯವತ್‍ಮಾಲ್
ನಂದರ್‍ಬಾರ್
ವಾಸಿಂ
ಗೊಂಡಿಯ
ಹಿಂಗೊಲಿ

	ಈ ರಾಜ್ಯದ ಕೆಲವು ಪ್ರಮುಖ ನಗರಗಳು ಮತ್ತು ಅವುಗಳ ಜನಸಂಖ್ಯೆ (1981) ಈ ರೀತಿ ಇವೆ : ಬೃಹದ್ ಮುಂಬಯಿ 8,243,405, ಪುಣೆ 1,380,395, ನಾಗಪುರ 2,302,066, ಉಲ್ಲಾಸನಗರ 648,671, ಸೊಲ್ಲಾಪುರ 514,860, ನಾಸಿಕ್ 429,034 ಠಾಣೆ 638,651. ಕೊಲ್ಲಾಪುರ 351,392, ಔರಂಗಾಬಾದ್ 316,421, ಸಾಂಗಲಿ 268,988, ಅಮರಾವತಿ 261,404, ಮಾಲೇಗಾಂವ 245,883, ಅಕೋಲಾ 225, 412, ಧೂಳೆ 210,759, ನಾಂದೇಡ 191, 269. ಅಹಮ್ಮದ್ ನಗರ 181,210, ಜಳಗಾಂವ 145,335, ಈಚಲಕರಂಜಿ 133,751, ಭುಸಾವಳ 132,142. ಜಾಲ್ನ 122,276, ಚಂದ್ರಪುರ 115,777, ಭಿವಂಡಿ 115, 208. ಲಾತೋರ್ 111,986. ಪರಭಣಿ 109,364. ಗೋಂಧಿಯ 100,423.

	ಸಂಕ್ಷಿಪ್ತ ಇತಿಹಾಸ : ಮಹಾರಾಷ್ಟ್ರದ ಹೆಸರು ಮೊತ್ತಮೊದಲಿಗೆ 17ನೆಯ ಶತಮಾನದ ಶಿಲಾಶಾಸನಗಳಲ್ಲಿ ಕಂಡುಬಂದಿದೆ. ಕ್ರಿಸ್ತ ಪೂರ್ವದಿಂದಲೂ ಗ್ರೀಸ್ ಮತ್ತು ಮಧ್ಯ ಏಷ್ಯಾಗಳಿಂದ ಈ ಪ್ರದೇಶಕ್ಕೆ ಅನೇಕ ಜನರು ಬಂದು ನೆಲಸಿದ್ದರೆನ್ನುವರು. ಈ ಮಂದಿ ಇಲ್ಲಿಯ ಗುಡ್ಡ ಗಾಡುಗಳಲ್ಲಿ ನೆಲಸಿದ್ದ ಮೂಲ ನಿವಾಸಿಗಳಾದಗೊಂಡ, ಭಿಲ್, ವಾರ್ಲಿ ಕೋಳಿ, ಠಾಕೂರ್, ವಡ್ಡರು, ಮಲ್ಲರು, ಕಾಥೋಡಿ. ಕಾಟರೀ ಮುಂತಾದವರೊಡನೆ ಹೊಂದಿಕೊಂಡು ಒಂದು ಹೊಸ ಜನಾಂಗ ಇಲ್ಲಿ ರೂಪುಗೊಂಡಿತು. ಈ ಬಗೆಯಲ್ಲಿ ಕ್ರಿ.ಶ. 500ರ ಸುಮಾರಿಗೆ ಮರಾಠಾ ಜನಾಂಗ ರೂಪುಗೊಂಡಿತೆಂದು ಹೇಳುವರು. ಇವರ ಭಾಷೆ ಮರಾಠಿ ಎನಿಸಿತು. ಕ್ರಿ. ಪೂ. 321 ರಿಂದ 184ರ ತನಕ ಮಹಾರಾಷ್ಟ್ರ ಮೌರ್ಯಸಾಮ್ರಾಜ್ಯದ ಒಂದು ಅಂಗವಾಗಿತ್ತು. ಮೌರ್ಯರ ಅನಂತರ ಶಾತವಾಹನ ದೊರೆಗಳು ಈ ಪ್ರದೇಶದ ಮೇಲೆ ಕ್ರಿ. ಶ. 2ನೆಯ ಶತಕದ ಅಂದರೆ 300 ವರ್ಷ ಆಳ್ವಿಕೆ ನಡೆಸಿದರು. ಕ್ರಿ. ಶ 249ರಿಂದ ತ್ರೈಕೂಟಕ ಅರಸರು ಇಲ್ಲಿ ಆಳಿದರೆಂದು ಮುಂಬಯಿ ಬಳಿಯ ಕನ್ಹೇರಿ ಗುಹೆಗಳಲ್ಲಿರುವ ಶಿಲಾಶಾಸನಗಳಲ್ಲಿ ಲಿಖಿತವಾಗಿದೆ. ಅವರ ಅನಂತರ ಕ್ರಿ. ಶ. 300ರಿಂದ 600ತ ತನಕ ವಾಕಾಟಕ ದೊರೆಗಳು ಅಧಿಕಾರ ನಡೆಸಿದರೆಂದು ಅಜಂತಾ ಗುಹೆಗಳಲ್ಲಿಯ ಶಿಲಾಶಾಸನಗಳಿಂದ ತಿಳಿಯುತ್ತದೆ. ಕೆಲಕಾಲ ಕಲಚೂರ್ಯರ ಕೈವಶವಾಗಿದ್ದ ಮಹಾರಾಷ್ಟ್ರ ಮುಂದೆ ಬಹುಕಾಲ ಚಾಲುಕ್ಯರ ಆಡಳಿತದಲ್ಲಿತ್ತು. ಕ್ರಿ. ಶ. 760ರಿಂದ 973ರ ತನಕ ಮಾನ್ಯಖೇಟದ (ಈಗಿನ ಮಳಖೇಡ) ರಾಷ್ಟ್ರಕೂಟರೂ ಈ ಪ್ರದೇಶವನ್ನಾಳಿದರು. 189ರಿಂದ 1307ರ ತನಕ ದೇವಗಿರಿಯ ಯಾದವರು ಇಲ್ಲಿ ರಾಜ್ಯಭಾರ ನಡೆಸಿದರು. ಯಾದವರ ಪತನದ ತರುವಾಯ ಮಹಾರಾಷ್ಡ್ರ 16ನೆಯ ಶತಮಾನದಲ್ಲಿ ಮಹಮ್ಮದೀಯರ ಆಡಳಿತಕ್ಕೊಳಗಾಯಿತು. ಈ ಕಾಲದಲ್ಲಿ ಕಲಬುರ್ಗಿಯ ಬಹುಮನಿ ದೊರೆಗಳ ಆಳ್ವಿಕೆ ನಡೆಯಿತು. ಮುಂದೆ ಬಿಜಾಪುರ, ಗೋಲಕೊಂಡಾ, ಬಲ್ಹಾಣಪುರ, ಬೀದರ್ ಮತ್ತು ಅಹಮ್ಮದನಗರಗಳಲ್ಲಿ ಪ್ರತ್ಯೇಕವಾಗಿ ಪಟ್ಟವೇರಿದ ಐದು ಮನೆತನಗಳ ದೊರೆಗಳ ರಾಜ್ಯಭಾರ ನಡೆಯಿತು. ಈ ಅರಸರಿಗೆ ಅಧೀನರಾಗಿದ್ದ ಮರಾಠಾ ಸರದಾರರು ತಮ್ಮ ತಮ್ಮಲ್ಲಿ ಜಗಳ ಕಾಯುತ್ತಿದ್ದ ಅಶಾಂತಿಯ ಸಂಧಿಕಾಲದಲ್ಲಿಯೇ ಶಿವಾಜಿ ಹುಟ್ಟಿ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿ, ಮಹಾರಾಷ್ಟ್ರದ ಜನತೆಗೆ ಶಾಂತಿ, ಭದ್ರತೆ ನೀಡಿದ. ಶಿವಾಜಿಯ ಅನಂತರ ಪೇಶ್ವೆ ಮನೆತನ ತನ್ನ ಆಡಳಿತ ನಡೆಸಿತು. 1818ರಲ್ಲಿ ಮಹಾರಾಷ್ಟ್ರ ಬ್ರಿಟಿಷರ ಅಧಿಪತ್ಯಕ್ಕೊಳಗಾಗಿ 1947ರ ತನಕವೂ ಅವರ ವಶದಲ್ಲಿತ್ತು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾರಾಷ್ಟ್ರದ ಪಾತ್ರ ಮಹತ್ವದ್ದು. ಲೋಕಮಾನ್ಯ ಟಿಳಕ್, ಗೋಪಾಲಕೃಷ್ಣ ಗೋಖಲೆ, ವೀರಸಾವರ್‍ಕರ್ ಮತ್ತಿತರರು ಭಾರತದ ಬಿಡುಗಡೆಗಾಗಿ ಹೋರಾಡಿದ ನೇತಾರರು. ಬಾಳಾಶಾಸ್ತ್ರಿ ಜಾಂಬೇಕರ್, ಗೋಪಾಲ ಹರಿ ದೇಶಮುಖ (ಲೋಕರಹಿರವಾದಿ) ನ್ಯಾಯಮೂರ್ತಿಮಹಾದೇವ ಗೋವಿಂದ ರಾನಡೆ, ಜ್ಯೋತಿಬಾಫುಲೆ, ಗೋಪಾಲಗಣೇಶ ಅಗರಕರ್, ಬಾಬಾಸಾಹೇಬ್ ಅಂಬೇಡ್ಕರ್, ವಿಷ್ಣುಕೃಷ್ಣ ಚಿಪಳೊಣಕರ್, ಧೋಂಡೋ ಕೇಶದ ಕರ್ವೆ. ಕರ್ಮವೀರ ಭಾವುರಾವ್ ಪಾಟೀಲ ಮುಂತಾದವರು ಮಹಿಳಾ ಶಿಕ್ಷಣ. ಸಾಮಾಜಿಕ ಪರಿವರ್ತನೆ ಮತ್ತು ರಾಷ್ಟ್ರೀಯ ಜಾಗೃತಿಗಳನ್ನು ಸಾಧಿಸಲು ಹೆಣಗಿದ ಮಹನೀಯರು. ಚಕ್ರಧರ. ಮುಕುಂದರಾಜ, ಜ್ಞಾನೇಶ್ವರ, ನಾಮದೇವ ಏಕನಾಥ, ತುಕಾರಾಮ, ರಾಮದಾಸ, ಭಾನುದಾಸ ಮುಂತಾದ ಸಂತರೂ ಕವಿಗಳೂ ಮಹಾರಾಷ್ಟ್ರದ ಸಾಹಿತ್ಯ-ಸಂಸ್ಕøತಿಯನ್ನು ಬೆಳೆಸಿ ಮರಾಠಿ ಭಾಷೆಯ ಶ್ರೀಮಂತಿಕೆಯನ್ನೂ ಹೆಚ್ಚಿಸಿದವರು. ಈ ರಾಜ್ಯದಲ್ಲಿ ಹಿಂದು, ಮುಸಲ್ಮಾನ, ಕ್ರಿಶ್ಚಿಯನ್, ಪಾರ್ಸಿ, ಜೈನ, ಬೌದ್ಧ, ಶೇಖ್ ಮತ್ತು ವೀರಶೈವ ಮತಗಳ ಜನರು ವಾಸಿಸುತ್ತಾರೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಗುಜರಾತಿ ಮತ್ತು ಮರಾಠಿ ಭಾಷೆಗಳನ್ನಾಡುವ ಎರಡು ವರ್ಗದ ಮಂದಿಯನ್ನು ಒಂದೇ ರಾಜ್ಯದಲ್ಲಿ ಸೇರಿಸಿದ್ದು ಮುಂಬಯಿ ರಾಜ್ಯಾಡಳಿತದ ಕೇಂದ್ರವಾಗಿತ್ತು. ಆದರೆ ಈ ದ್ವಿಭಾಷಾ ಜನರು ತಮ್ಮ ತಮ್ಮ ಅಭಿವೃದ್ಧಿಗೆ ಪ್ರತ್ಯೇಕತೆ ಬೇಕೆಂದು ಕೋರಿದಾಗ ಮತ್ತು ಆಡಳಿತದ ಅನುಕೂಲಕ್ಕೆ ತಕ್ಕಂತೆ ಮುಂಬಯಿ ರಾಜ್ಯ ಪುನರ್ ವ್ಯವಸ್ಥಾ ಕಾನೂನಿನಂತೆ ಈ ರಾಜ್ಯವನ್ನು ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳೆಂದು ವಿಂಗಡಿಸಲಾಯಿತು. ಇಂದಿನ ಮಹಾರಾಷ್ಟ್ರ ರಾಜ್ಯ 1960 ಮೇ 1 ರಂದು ಅಸ್ತಿತ್ವಕ್ಕೆ ಬಂತು.								
 (ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ